ಬೆಂಗಳೂರು: 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಇಂದಿನಿಂದ ಆರಂಭವಾಗಿದ್ದು ಮೊದಲ ದಿನವೇ ತರಗತಿಗಳು ಸಹ ನಡೆಯಲಿವೆ.
ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಸಿಹಿಯೂ ಇದ್ದು ,ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳ ವಿತರಣೆಯನ್ನು ಮಾಡಲಾಗುತ್ತದೆ.
ಒಂದರಿಂದ ಹತ್ತನೇ ತರಗತಿಯವರೆಗೆ ರಾಜ್ಯದಲ್ಲಿರುವ 46 ಸಾವಿರ ಶಾಲೆಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಿವೆ.

ಇದಕ್ಕೆ ಸಂಬಂಧಿಸಿದ ಶೈಕ್ಷಣಿಕ ವೇಳಾಪಟ್ಟಿ ಈಗಾಗಲೇ ಬಿಡುಗಡೆಯೂ ಆಗಿದೆ.
ಇನ್ನು ಹಲವು ಖಾಸಗಿ ಶಾಲೆಗಳು ಈಗಾಗಲೇ ಶೈಕ್ಷಣಿಕ ಚಟುವಟಿಕೆ ಆರಂಭಿಸಿದ್ದು ಉಳಿದ ಶಾಲೆಗಳು ಸಹ ಇವತ್ತನಿಂದ ಶೈಕ್ಷಣಿಕ ಚಟುವಟಿಕೆ ನಡೆಸಲಿದೆ.
ಈ ಮಧ್ಯೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಅದರ ನಿಯಮದ ಪ್ರಕಾರ ಶಾಲೆ ಪ್ರಾರಂಭವಾಗುವ ಮುಂಚಿತವಾಗಿ ಸಂಪೂರ್ಣ ಶಾಲೆಯ ಸ್ವಚ್ಛತೆ ಕಾರ್ಯ ಕೈಗೊಂಡು ಪೂರ್ಣಗೊಳಿಸಬೇಕು.

ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳು ಸುಸ್ಥಿತಿಯಲ್ಲಿರಬೇಕು.
ಶಿಥಿಲ ಕಟ್ಟಡಗಳು, ವಿದ್ಯುತ್ ತಂತಿಗಳಿಂದ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು.
ಸ್ಥಳೀಯರ ಸಹಕಾರ ಪಡೆದು ಇಂತಹ ಸನ್ನಿವೇಶಗಳನ್ನು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
