ಬಿ.ಸಿ.ರೋಡ್: ಹಿಂದೂ ಕಾರ್ಯಕರ್ತ ಭರತ್ ಕುಂಡ್ಡೆಲ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾ ಸಭೆಯಲ್ಲಿ ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ನ್ಯಾಯಾಲಯದ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದನ್ನು ಬಿಜೆಪಿ ಕಾನೂನು ಪ್ರಕೋಷ್ಠ–ಬಂಟ್ವಾಳ ಮಂಡಲ ತೀವ್ರವಾಗಿ ಖಂಡಿಸಿದೆ.

ಬಿ.ಸಿ.ರೋಡಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಸಾದ್ ಕುಮಾರ್ ರೈ ಅವರು ಪ್ರಕರಣದ ನ್ಯಾಯಾಲಯದ ಪ್ರಕ್ರಿಯೆ ಹಾಗೂ ವಾಸ್ತವಾಂಶಗಳ ಕುರಿತು ವಿವರ ನೀಡಿದ್ದರು. ಆದರೆ ನ್ಯಾಯಾಲಯದ ಪ್ರಕ್ರಿಯೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದಡಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ. ಇದು ಹಿಂದೂ ಕಾರ್ಯಕರ್ತರ ಪರವಾಗಿ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಹೋರಾಡುವ ವಕೀಲರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠ ಆರೋಪಿಸಿದೆ.

ಪ್ರಕರಣದ ಸತ್ಯಾಸತ್ಯತೆ ಕುರಿತು ಮಾಹಿತಿ ನೀಡಿದ್ದಕ್ಕೆ ನ್ಯಾಯಾಂಗ ನಿಂದನೆಯ ಆರೋಪದ ಬಣ್ಣ ಬಳಿದು ವಕೀಲರನ್ನು ಬೆದರಿಸುವ ಪ್ರಯತ್ನ ಖಂಡನೀಯ. ಇಂತಹ ಕುತಂತ್ರಗಳು ಹಾಗೂ ಬೆದರಿಕೆಗಳಿಗೆ ಹಿಂದೂ ಕಾರ್ಯಕರ್ತರು, ಮುಖಂಡರು ಮತ್ತು ವಕೀಲರು ಹೆದರುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರ ಪರವಾಗಿ ನ್ಯಾಯಾಲಯದಲ್ಲಿ ಕಾನೂನಾತ್ಮಕ ಹೋರಾಟ ನಡೆಸಲು ಸಮರ್ಥ ವಕೀಲರು ಸದಾ ಸಿದ್ಧರಾಗಿದ್ದಾರೆ ಎಂದು ಪ್ರಕೋಷ್ಠ ತಿಳಿಸಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರವು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹಿಂದೂ ಕಾರ್ಯಕರ್ತರು, ಮುಖಂಡರು ಹಾಗೂ ವಕೀಲರನ್ನು ಗುರಿಯಾಗಿಸುತ್ತಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠ ಆರೋಪಿಸಿದೆ. ಪೊಲೀಸ್ ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ಸ್ವಂತ ವಿವೇಚನೆಯಿಂದ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದೆ.
ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ನೀಡಲಾಗಿರುವ ದೂರನ್ನು ತಕ್ಷಣ ಹಿಂಪಡೆದು, ದೂರುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾನೂನು ಪ್ರಕೋಷ್ಠ–ಬಂಟ್ವಾಳ ಮಂಡಲದ ಸಂಚಾಲಕ ವೀರೇಂದ್ರ ಎಂ. ಸಿದ್ದಕಟ್ಟೆ ಆಗ್ರಹಿಸಿದ್ದಾರೆ.


