Breaking
29 Sep 2026, Tue

“ಪೊಲೀಸ್ ನೋಟೀಸ್ ನನ್ನ ಕೂದಲಿಗೆ ಸಮ” – ಡಾ. ಕೆ. ಪ್ರಭಾಕರ ಭಟ್ ತೀಕ್ಷ್ಣ ಪ್ರತಿಕ್ರಿಯೆ

ಬಂಟ್ವಾಳ: ಕೊಳತ್ತಮಜಲಿನಲ್ಲಿ ಕಳೆದ ವರ್ಷ ನಡೆದ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೀಡಿರುವ ಸಾಕ್ಷಿದಾರರ ನೋಟೀಸ್ ಕುರಿತು ಆರ್ಎಸ್ಎಸ್ ಮುಖಂಡ ಡಾ. ಕೆ. ಪ್ರಭಾಕರ ಭಟ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.


“ಪೊಲೀಸರು ನೀಡಿರುವ ಸಾಕ್ಷಿದಾರರ ನೋಟೀಸ್ ನನ್ನ ಕೂದಲಿಗೆ ಸಮ. ಈಗಾಗಲೇ ನನ್ನ ಮೇಲೆ 110 ಕೇಸ್ಗಳಿವೆ. ಇದ್ಯಾವ ಲೆಕ್ಕ?” ಎಂದು ಅವರು ಪ್ರಶ್ನಿಸಿದ್ದಾರೆ.


ಬಿ.ಸಿ.ರೋಡಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಸೋಮವಾರ ನಡೆದ ‘ಬಿ.ಸಿ.ರೋಡು ಚಲೋ’ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
“ನಾನು ಮಾತನಾಡಿರುವುದು ನಿಜ. ಸಂವಿಧಾನ ನೀಡಿರುವ ಸ್ವಾತಂತ್ರ್ಯದಡಿ ಮಾತನಾಡಿದ್ದೇನೆ. ಆದರೆ ಯಾರನ್ನೂ ಕೊಲೆ ಮಾಡಿ ಎಂದು ನಾನು ಹೇಳಿಲ್ಲ. ನಡೆದ ಕೃತ್ಯವನ್ನು ನಾನು ಸಮರ್ಥಿಸುವುದೂ ಇಲ್ಲ. ಅದು ವೈಯಕ್ತಿಕ ಕಾರಣಗಳಿಂದ ನಡೆದ ಕೊಲೆ. ನಾನು ಫೋನ್ನಲ್ಲಿ ಏನು ಮಾತನಾಡಿದ್ದೇನೆ ಎಂಬುದನ್ನು ಧ್ವನಿ ಸಂಗ್ರಹ ಪರೀಕ್ಷೆ ಮಾಡಿದರೆ ಅವರಿಗೆ ತಿಳಿಯುವುದಿಲ್ಲವೇ? ನನಗೆ ವಿಚಾರಣೆಗೆ ಸಮಯ ನೀಡಲು ಅವರು ಯಾರು?” ಎಂದು ಅವರು ಪ್ರಶ್ನಿಸಿದರು.


“ಕಾನೂನು ಪ್ರಕ್ರಿಯೆಯಂತೆ ಪೊಲೀಸರು ನಡೆದುಕೊಳ್ಳಲಿ”
ಮುಖ್ಯಮಂತ್ರಿ ಅಥವಾ ಗೃಹಸಚಿವರು ಹೇಳಿದ್ದಾರೆ ಎಂಬ ಕಾರಣಕ್ಕೆ ಕಾನೂನು ಪ್ರಕ್ರಿಯೆಯನ್ನು ಬದಿಗೊತ್ತಬಾರದು ಎಂದು ಪ್ರಭಾಕರ ಭಟ್ ಹೇಳಿದರು.
“ಪ್ರಕರಣದಲ್ಲಿ ಭಾಗಿಯಾಗದ ಭರತ್ ಕುಮ್ಡೇಲು ಮತ್ತಿತರರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಲಾಗಿದೆ. ದೇಶ ವಿರೋಧಿ ಹಾಗೂ ಸಮಾಜ ವಿರೋಧಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಭರತ್ ಬಂಧನದ ಬಳಿಕ ಆತನ ಮಗುವಿಗೆ ಅನಾರೋಗ್ಯವಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದ ರಿಕ್ಷಾ ಚಾಲಕನ ವಿರುದ್ಧವೂ ಪ್ರಕರಣ ದಾಖಲಿಸಿರುವುದು ಸರಿಯಲ್ಲ” ಎಂದು ಅವರು ಹೇಳಿದರು.


“ನನ್ನ ಮೇಲೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಯೋಚನೆ ಇರಬಹುದು. ಇಂತಹ ನೀತಿಯ ಮೂಲಕ ಪೊಲೀಸರು ವರ್ತಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.
ಭರತ್ ಕುಮ್ಡೇಲು ಅವರ ಮಂಪರು ಪರೀಕ್ಷೆ ನಡೆಸುವ ಬದಲು ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್ ಅವರ ಮಂಪರು ಪರೀಕ್ಷೆ ನಡೆಸಲಿ ಎಂದು ಅವರು ವ್ಯಂಗ್ಯವಾಗಿ ಹೇಳಿದರು.


ಸೌಜನ್ಯಾ ಪ್ರಕರಣ: ಎಸ್ಐಟಿ ತಂಡದ ಕೆಲ ಅಧಿಕಾರಿಗಳ ಬಗ್ಗೆ ಸಂಶಯ
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಹತ್ಯೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ತಂಡದ ಬಗ್ಗೆಯೂ ಪ್ರಭಾಕರ ಭಟ್ ಅಸಮಾಧಾನ ವ್ಯಕ್ತಪಡಿಸಿದರು.
“ಎಸ್ಐಟಿ ರಚಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ ತಂಡದಲ್ಲಿರುವ ಕೆಲ ಅಧಿಕಾರಿಗಳ ಬಗ್ಗೆ ನನಗೆ ಸಂಶಯವಿದೆ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಒಳ್ಳೆಯವರಾಗಿದ್ದು, ಅವರು ಯಾವುದೇ ಕಡೆಗೆ ವಾಲುವವರಲ್ಲ. ಆದರೆ ಇತರ ಕೆಲ ಅಧಿಕಾರಿಗಳ ಪ್ರಾಮಾಣಿಕತೆ ಬಗ್ಗೆ ಸಂಶಯವಿದೆ” ಎಂದು ಅವರು ಹೇಳಿದರು.


ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಅಪರಾಧಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಪೊಲೀಸರಿಗಿದೆ. “ಸತ್ಯ ಏನೆಂದು ಹುಡುಕಲಿ. ನೂರಕ್ಕೆ ನೂರು ಸತ್ಯ ಸಿಗುತ್ತದೆ. ಈ ಹಿಂದೆ ತನಿಖೆ ನಡೆಸಿದ ಅಧಿಕಾರಿಗಳನ್ನು ತಂಡದಲ್ಲಿ ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈಗಿನ ತಂಡದಲ್ಲಿರುವ ಕೆಲ ಅಧಿಕಾರಿಗಳ ಬಗ್ಗೆ ಜನತೆಗೆ ಗೊತ್ತಿದೆ” ಎಂದು ಪ್ರಭಾಕರ ಭಟ್ ಹೇಳಿದರು.

Leave a Reply

Your email address will not be published. Required fields are marked *