Breaking
16 Oct 2026, Fri

ಕಾಸರಗೋಡು: ಓಣಂ ಆಚರಣೆ ವೇಳೆ ತೆರೆದ ಬಾವಿಗೆ ಬಿದ್ದು ಬಾಲಕ ಸಾವು

ಕಾಸರಗೋಡು: ಓಣಂ ಹಬ್ಬದ ಆಚರಣೆ ವೇಳೆ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು 15 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಕಾಞ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಕೊಡಕ್ಕಾಡ್‌ನ ಆನಿಕ್ಕಾಡಿ ನಿವಾಸಿ ಸನೂಪ್ (15) ಎಂದು ಗುರುತಿಸಲಾಗಿದೆ.

ಚೀಮೇನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ(ಆ.27) ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಸನೂಪ್ ಓಣಂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಬಳಿಕ ಸಹಪಾಠಿಗಳೊಂದಿಗೆ ಹೊರಗೆ ತೆರಳಿದ್ದ ವೇಳೆ ಸಮೀಪದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ.

ವಿಷಯ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸನೂಪ್ ಅವರನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಂಜೆ ಸನೂಪ್ ಮೃತಪಟ್ಟಿದ್ದಾರೆ.

ಸನೂಪ್ ಅವರು ಚೆರುವತ್ತೂರಿನ ತಿಮಿರಿ ಕುಟ್ಟಮಠ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

Leave a Reply

Your email address will not be published. Required fields are marked *