ಕುಂದಾಪುರ: ಗಂಗೊಳ್ಳಿ ನದೀಮುಖದ ಬಳಿ ಸಮುದ್ರದಲ್ಲಿ ಮುಳುಗಿದ್ದ ‘ಶ್ರೀ ಬಾಲಾಂಜನೇಯ’ ಪರ್ಸ್‌ಸೀನ್ ಮೀನುಗಾರಿಕಾ ದೋಣಿಯ ಅವಶೇಷಗಳು ಗುರುವಾರ ಕೋಟ ಪಡುಕೆರೆಯ ಹಂದಟ್ಟು ಸಮುದ್ರ ತೀರದಲ್ಲಿ ಪತ್ತೆಯಾಗಿವೆ.

ಬುಧವಾರ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಈ ದೋಣಿ, ನದೀಮುಖದ ಬಳಿ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ಮುಳುಗಿತ್ತು. ಬಳಿಕ ಅಲೆಗಳ ರಭಸಕ್ಕೆ ದೋಣಿಯ ಅವಶೇಷಗಳು ಕೊಚ್ಚಿಕೊಂಡು ಬಂದು ಹಂದಟ್ಟು ಸಮುದ್ರ ತೀರದಲ್ಲಿ ಪತ್ತೆಯಾಗಿವೆ.

ಮುಳುಗಿದ ದೋಣಿ ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಅದರ ವಿವಿಧ ಭಾಗಗಳು ಕರಾವಳಿಯುದ್ದಕ್ಕೂ ಬಂದು ಸೇರಿವೆ. ದೋಣಿಯಲ್ಲಿದ್ದ ಮೀನುಗಾರಿಕಾ ಬಲೆಗಳು ಹಾಗೂ ಇತರ ಉಪಕರಣಗಳು ಸಮುದ್ರಪಾಲಾಗಿವೆ ಎನ್ನಲಾಗಿದೆ.

ಭಟ್ಕಳದ ಮುಂಡಳ್ಳಿಯ ನಾಗರಾಜ್ ಮೊಗೇರ್ ಅವರಿಗೆ ಸೇರಿದ ‘ಶ್ರೀ ಬಾಲಾಂಜನೇಯ’ ದೋಣಿಯಲ್ಲಿ ಒಟ್ಟು 27 ಮಂದಿ ಮೀನುಗಾರರಿದ್ದರು. ದೋಣಿ ಅಪಾಯಕ್ಕೆ ಸಿಲುಕಿದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಮೀನುಗಾರರು ಹಾಗೂ ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲ 27 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದರು.

ದೋಣಿಯ ಅವಶೇಷಗಳು ಪತ್ತೆಯಾದ ಮಾಹಿತಿ ತಿಳಿದು ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮೇಶ್ ಕೆ., ಸಬ್‌ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯಿಂದ ಉಂಟಾಗಿರುವ ನಷ್ಟದ ಪ್ರಮಾಣದ ಕುರಿತು ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.






