Breaking
28 Aug 2026, Fri

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 5.28 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 5.28 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಬ್ಯಾಂಕಾಕ್‌ನಿಂದ ಆಗಮಿಸಿದ್ದ ಪ್ರಯಾಣಿಕನೊಬ್ಬನ ಬ್ಯಾಗೇಜ್ ಪರಿಶೀಲನೆ ನಡೆಸಿದ ವೇಳೆ ಸುಮಾರು 1.1 ಕೋಟಿ ರೂ. ಮೌಲ್ಯದ 3.13 ಕೆ.ಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ.

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಬ್ಯಾಂಕಾಕ್‌ನಿಂದ ಬಂದಿದ್ದ ಮತ್ತೊಬ್ಬ ಪ್ರಯಾಣಿಕನ ಬ್ಯಾಗೇಜ್ ಪರಿಶೀಲಿಸಿದಾಗ 4.18 ಕೋಟಿ ರೂ. ಮೌಲ್ಯದ 11.93 ಕೆ.ಜಿ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿ ಆರೋಪಿಗಳನ್ನು ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಬಂಧಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಕಾಲೇಜು ರಸ್ತೆ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೈಡ್ರೋಪೋನಿಕ್ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕೇರಳ ಮೂಲದ ಯುವಕನನ್ನು ಬಾಲಗೂರು ಪೊಲೀಸರು ಬಂಧಿಸಿದ್ದಾರೆ.

ಅಶ್ವಿನ್ ಟಾಮ್ ಜೋಶ್ (24) ಬಂಧಿತ ಆರೋಪಿ. ಈತನಿಂದ ಸುಮಾರು 9 ಲಕ್ಷ ರೂ. ಮೌಲ್ಯದ 276 ಗ್ರಾಂ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಮಿಟ್ಟಗಾನಹಳ್ಳಿ ಗ್ರಾಮದ ಕಡೆಗೆ ತೆರಳುವ ರಸ್ತೆಯಲ್ಲಿರುವ ಕಾಲೇಜು ಸಮೀಪ ಆಗಸ್ಟ್ 17ರಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಆರೋಪಿ ಬ್ಯಾಗ್‌ನಲ್ಲಿ ಗಾಂಜಾ ಸಂಗ್ರಹಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಮಾದಕ ವಸ್ತುಗಳ ಸಮೇತ ಬಂಧಿಸಿದ್ದಾರೆ. ಆರೋಪಿ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *