Breaking
14 Oct 2026, Wed

ಬಿ.ಸಿ.ರೋಡಿನಲ್ಲಿ ಅ.17ರಿಂದ ‘ಶನಿವಾರ ಸಂತೆ’ ಆರಂಭ

ಬಂಟ್ವಾಳ: ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಇದೇ ಮೊದಲ ಬಾರಿಗೆ ಬಿ.ಸಿ.ರೋಡಿನ ಸ್ಪರ್ಶ ಸಭಾಂಗಣದಲ್ಲಿ ಅ.17ರಿಂದ ಪ್ರತೀ ಶನಿವಾರ ‘ವಾರದ ಸಂತೆ’ ಆರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ತಿಳಿಸಿದ್ದಾರೆ.


ಬಿ.ಸಿ.ರೋಡಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತೀ ಶನಿವಾರ ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ಸಂತೆ ನಡೆಯಲಿದೆ. ಇದರ ಮೂಲಕ ತಾಲ್ಲೂಕಿನ ಕೃಷಿಕರಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದರ ಜತೆಗೆ ಗ್ರಾಹಕರಿಗೂ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಲು ಉತ್ತಮ ಅವಕಾಶ ಕಲ್ಪಿಸಲಾಗುವುದು ಎಂದರು.


ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಬೆಳೆಸುವುದು ಹಾಗೂ ಸ್ಥಳೀಯ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವುದು ಈ ವಿನೂತನ ಪ್ರಯತ್ನದ ಮುಖ್ಯ ಉದ್ದೇಶವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ‘ಶನಿವಾರ ಸಂತೆ’ಯನ್ನು ಉದ್ಘಾಟಿಸಲಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಸುಮಾರು 19 ಮಾರಾಟ ಮಳಿಗೆಗಳು ನೋಂದಣಿ ಮಾಡಿಕೊಂಡಿದ್ದು, 30ಕ್ಕೂ ಅಧಿಕ ಮಳಿಗೆಗಳು ಆರಂಭಗೊಳ್ಳುವ ನಿರೀಕ್ಷೆಯಿದೆ. ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊರಜಿಲ್ಲೆಯ ಕೃಷಿಕರಿಗೂ ಮಳಿಗೆ ತೆರೆಯಲು ಸೂಕ್ತ ಅವಕಾಶ ಕಲ್ಪಿಸಲಾಗಿದೆ. ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ ಎಂದರು.


ಆಮಂತ್ರಣ ಪತ್ರ ಬಿಡುಗಡೆ
ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಜಮೀನಿನ ಮಾಲೀಕರಾದ ಮೋಹನ್ ಸಾಲಿಯಾನ್ ಮತ್ತು ಶ್ಯಾಮಲಾ ಮೋಹನ್ ಸಾಲಿಯಾನ್ ದಂಪತಿ ಬಿಡುಗಡೆಗೊಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ್ ರೈ, ನಿರ್ದೇಶಕರಾದ ಬಿ. ಗಜೇಂದ್ರ ಪ್ರಭು, ರವೀಂದ್ರ, ವಿಜಯಕುಮಾರಿ ಇಂದ್ರ, ಸುಧಾಕರ ಸಾಲ್ಯಾನ್, ಬಟ್ಯಪ್ಪ ಶೆಟ್ಟಿ, ಲೋಕೇಶ್ ಸುವರ್ಣ, ಸ್ವಷ್ನ ರಾಜರತ್ನ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್ ಹಾಗೂ ಶಾಖಾಧಿಕಾರಿ ಶೈಲೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *