Breaking
14 Oct 2026, Wed

ಕಕ್ಯಪದವು: ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ನಮನ್ ಸಿ. ಶೆಟ್ಟಿಗೆ ತೃತೀಯ ಸ್ಥಾನ; ರಾಜ್ಯಮಟ್ಟಕ್ಕೆ ಆಯ್ಕೆ

ಕಕ್ಯಪದವು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ 14 ಮತ್ತು 17 ವರ್ಷದೊಳಗಿನ ವಯೋಮಿತಿಯ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಚೆಸ್ ಪಂದ್ಯಾಟ ಆ.28ರಂದು ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿಯಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ಎಲ್.ಸಿ.ಆರ್. ಇಂಡಿಯನ್ ವಿದ್ಯಾಸಂಸ್ಥೆಯ ಪ್ರಾಥಮಿಕ ವಿಭಾಗದ 7ನೇ ತರಗತಿ ವಿದ್ಯಾರ್ಥಿ ನಮನ್ ಸಿ. ಶೆಟ್ಟಿ ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ್ದಾರೆ. ಇದರೊಂದಿಗೆ ಕೊಪ್ಪಳದಲ್ಲಿ ನಡೆಯಲಿರುವ ರಾಜ್ಯಮಟ್ಟದ ಚೆಸ್ ಪಂದ್ಯಾಟಕ್ಕೆ ಅವರು ಆಯ್ಕೆಯಾಗಿದ್ದಾರೆ.

ಶ್ರೀ ಎಂ. ಚಂದ್ರಹಾಸ ಶೆಟ್ಟಿ ಹಾಗೂ ಶ್ರೀಮತಿ ವಿನಯ ರೈ ದಂಪತಿಯ ಪುತ್ರನಾಗಿರುವ ನಮನ್ ಸಿ. ಶೆಟ್ಟಿಗೆ ಶಾಲೆಯ ದೈಹಿಕ ಶಿಕ್ಷಕಿ ಹರಿಣಾಕ್ಷಿ ತರಬೇತಿ ನೀಡಿದ್ದಾರೆ.

ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಜೋಸ್ಟನ್ ಲೋಬೋ, ಸಂಯೋಜಕರಾದ ಯಶವಂತ್ ಜಿ. ನಾಯಕ್ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ಕೆ. ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *