ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು ಸಂಭವಿಸಿದ ಖಾಸಗಿ ತರಬೇತಿ ವಿಮಾನ ಅಪಘಾತದಲ್ಲಿ ಉಡುಪಿ ಮೂಲದ ಪೈಲಟ್ ತರಬೇತಿ ವಿದ್ಯಾರ್ಥಿ ಅಭಿಷೇಕ್ ಪೂಜಾರಿ (22) ಮೃತಪಟ್ಟಿದ್ದಾರೆ.

ಅಭಿಷೇಕ್ ಪೂಜಾರಿ ಅವರು ಉಡುಪಿ ಜಿಲ್ಲೆಯ ಕಣಜಾರು ಗ್ರಾಮದ ಕಾಡೆಬರ್ಕೆ ಮೂಲದವರಾಗಿದ್ದು, ಈ ಪ್ರದೇಶವು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದೆ. ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಪೈಲಟ್ ತರಬೇತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಅಭಿಷೇಕ್ ಅವರ ತಂದೆ ಪ್ರಭಾಕರ್ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ವಾಸವಾಗಿದ್ದಾರೆ. ಅಭಿಷೇಕ್ ಅವರು ಕುಟುಂಬದೊಂದಿಗೆ ಆಗಾಗ ಕಣಜಾರು ಗ್ರಾಮದ ಕಾಡೆಬರ್ಕೆಯಲ್ಲಿರುವ ತಮ್ಮ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಕಾನ್ಪುರಕ್ಕೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.







