ಅಡ್ಡೂರು ಸೇತುವೆ ಕಾಮಗಾರಿ ತಕ್ಷಣ ಕೈಗೆತ್ತಿಕೊಳ್ಳಿ – ಭರವಸೆಗಳ ಸಮಿತಿ ಸಭೆಯಲ್ಲಿ ಶಾಸಕ ರಾಜೇಶ್‌ ನಾಯ್ಕ್‌ ಅಧಿಕಾರಿಗಳಿಗೆ ಸೂಚನೆ

ಬಂಟ್ವಾಳ: ಪೊಳಲಿ ಸಮೀಪದ ಅಡ್ಡೂರು ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದುರಸ್ಥಿಗೆ ಈಗಾಗಲೇ ಸರ್ಕಾರದಿಂದ ರೂ. 6.00 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದರು ಈವರೆಗೆ ಕಾಮಗಾರಿ ಕೈಗೆತ್ತಿಕೊಳ್ಳದಿರುವ ಬಗ್ಗೆ ಭರವಸೆಗಳ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ರಾಜೇಶ್‌ ನಾಯ್ಕ್ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ಶಾಸಕ ಭವನ-5 ರಲ್ಲಿ ಇಂದು ದಿನಾಂಕ 22-01-2025 ರಂದು ಕರ್ನಾಟಕ ವಿಧಾನ ಸಭೆಯ ಭರವಸೆಗಳ ಸಮಿತಿ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಭರವಸೆಗಳ ಬಗ್ಗೆ ನಡೆದ ಸಭೆಯಲ್ಲಿ ಅಡ್ಡೂರು ಸೇತುವೆ ದುರಸ್ಥಿ ಕುರಿತು ಅವರು ಅಧಿಕಾರಿಗಳ ಜೊತೆ ಚರ್ಚಿಸಿದರು.

ಅಡ್ಡೂರು ಸೇತವೆ ಶಿಥಿಲಗೊಂಡಿರುವುದರಿಂದ ಕಳೆದ ಆಗಸ್ಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಈ ಸೇತುವೆಯಲ್ಲಿ ಬಸ್ಸು ಸೇರಿದಂತೆ ಘನ ವಾಹನಗಳ ಸಂಚಾರಕ್ಕೆ ನಿರ್ಭಂದ ಹೇರಿರುತ್ತಾರೆ. ಬಸ್ಸು ಸಂಚಾರ ಇಲ್ಲದೆ ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ, ಕೆಲಸಕ್ಕೆ ತೆರಳುವವರಿಗೆ ಹಾಗೂ ಪ್ರಸಿದ್ದ ಪೊಳಲಿ ರಾಜಾರಾಜೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಸ್ಥಳೀಯ ಪರಿಸರದವರಿಗೆ ತೊಂದರೆಯಾಗಿರುತ್ತದೆ. ಈ ಸೇತುವೆಯ ಪುನರ್ ನಿರ್ಮಾಣಕ್ಕೆ ರೂ. 50.00 ಕೋಟಿ ಬೇಕಾಗಿದ್ದು, ತಕ್ಷಣದ ಪರಿಹಾರಕ್ಕಾಗಿ ಸೇತುವೆ ದುರಸ್ಥಿಗೊಳಿಸಲು ಸರ್ಕಾರದಿಂದ ರೂ. 6.00 ಕೋಟಿ ಅನುದಾನ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆ ಮುಗಿದರು ಕಾಮಗಾರಿ ಆರಂಭಕ್ಕೆ ವಿಳಂಭಗೊಳಿಸುತ್ತಿರುವ ಬಗ್ಗೆ ಸಮಿತಿ ಸಭೆಯಲ್ಲಿ ಅಸಮಧಾನ ವ್ಯಕ್ತಪಡಿಸಿದರು.

ಶಾಸಕ ರಾಜೇಶ್‌ ನಾಯ್ಕ್‌ ಅವರು ಸಭೆಯಲ್ಲಿ ತಿಳಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ. ಸತ್ಯನಾರಾಯಣ ಅವರು ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯನ್ನು ಮುಂದಿನ ಮೂರು ದಿನಗಳೊಳಗೆ ಆರಂಭಿಸಲಾಗುವುದು. ಈ ಸೇತುವೆಯ ಪುನರ್‌ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂ. 50.00 ಕೋಟಿ ಅನುದಾನ ಮಂಜೂರಾತಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಭರವಸೆಗಳ ಸಮಿತಿ ಅಧ್ಯಕ್ಷರಾದ ಕೆ. ವೈ. ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರ್ನಾಟಕ ವಿಧಾನ ಸಭೆ ಸಚಿವಾಲಯ ಭರವಸೆಗಳ ಸಮಿತಿ ಅಧೀನ ಕಾರ್ಯದರ್ಶಿ ಎಸ್. ರಾಜಣ್ಣ, ಲೋಕೋಪಯೋಗಿ ಇಲಾಖೆ ಐಎಫ್‌ಎ ಡಾ. ಸೋಮನಾಥ್, ಕೆ.ಆರ್‌.ಡಿ.ಸಿ.ಎಲ್‌. ವ್ಯವಸ್ಥಾಪಕ ನಿರ್ದೇಶಕರಾದ ಲಿಂಗಮೂರ್ತಿ ಜಿ., ರಾಜ್ಯ ಹೆದ್ಧಾರಿ ಯೋಜನಾ ನಿರ್ದೇಶಕರಾದ ಜಗನ್ನಾಥ ಹಾಗೂ ಶಿವಮೊಗ್ಗ ಸರ್ಕಲ್‌ ಮತು ಮಂಗಳೂರು ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *