Breaking
18 Aug 2026, Tue

ಸಾಫ್ಟ್ವೇರ್ ಎಂಜಿನಿಯರ್ ಮತ್ತು 5 ವರ್ಷದ ಪುತ್ರ ಅನುಮಾನಾಸ್ಪದ ಸಾವು; ಪತ್ನಿ ವಶಕ್ಕೆ

ಬೆಂಗಳೂರು: ಚಿಕ್ಕಬಾಣವಾರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆಬಸವಪುರದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಅವರ ಐದು ವರ್ಷದ ಪುತ್ರ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.


ಮೃತರನ್ನು ಕುಣಿಗಲ್ ಮೂಲದ ಅಭಿನಂದನ್ (35) ಮತ್ತು ಅವರ ಪುತ್ರ ಯದುವೀರ್ (5) ಎಂದು ಗುರುತಿಸಲಾಗಿದೆ. ಅಭಿನಂದನ್ ಎಲೆಕ್ಟ್ರಾನಿಕ್ ಸಿಟಿಯ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ಹರಿಣಿ ಹಾಗೂ ಪುತ್ರನೊಂದಿಗೆ ಗುಡ್ಡೆಬಸವಪುರದಲ್ಲಿ ವಾಸವಾಗಿದ್ದರು.


ಭಾನುವಾರ ರಾತ್ರಿ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಬಳಿಕ ಇಬ್ಬರೂ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದ್ದರು. ಸೋಮವಾರ ಬೆಳಗ್ಗೆ ಹರಿಣಿ ಪತಿ ಮತ್ತು ಮಗನನ್ನು ಎಚ್ಚರಿಸಲು ತೆರಳಿದಾಗ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ತಂದೆ-ಮಗ ಮೃತಪಟ್ಟಿರುವುದು ಪತ್ತೆಯಾಗಿದೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.


ಇನ್ನೊಂದೆಡೆ, ಅಭಿನಂದನ್ ಮುಖ ಹಾಗೂ ದೇಹದ ಕೆಲ ಭಾಗಗಳಲ್ಲಿ ಹಲ್ಲೆಗೊಳಗಾದ ಗುರುತುಗಳು ಕಂಡುಬಂದಿದ್ದು, ಕಿವಿಯಿಂದ ರಕ್ತಸ್ರಾವವಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಮನೆಯ ಸಿಸಿ ಕ್ಯಾಮೆರಾ ದೃಶ್ಯಗಳ ಪರಿಶೀಲನೆ ವೇಳೆ ಕೆಲವು ಅಸ್ಪಷ್ಟತೆಗಳು ಕಂಡುಬಂದಿದ್ದು, ಕ್ಯಾಮೆರಾ ಆಫ್ ಆಗಿರುವುದು ಕೂಡ ಬೆಳಕಿಗೆ ಬಂದಿದೆ.


ಈ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಅಭಿನಂದನ್ ಹಾಗೂ ಹರಿಣಿಯ ಮೊಬೈಲ್ ಫೋನ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ವೇಳೆ ಹರಿಣಿ ಮನೆಯಲ್ಲೇ ಇದ್ದರು ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ಹರಿಣಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


ಇದೇ ವೇಳೆ, ತನ್ನ ಪುತ್ರ ಹಾಗೂ ಮೊಮ್ಮಗನನ್ನು ಕೊಲೆ ಮಾಡಲಾಗಿದೆ ಎಂದು ಅಭಿನಂದನ್ ತಾಯಿ ಆರೋಪಿಸಿದ್ದಾರೆ. ಚಿಕ್ಕಬಾಣವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿದುಬರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *