ಮಂಗಳೂರು: ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ‘ತಾಯಿ ಆರೋಗ್ಯ–ಆಟಿ ಆಹಾರ’ ಎಂಬ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಸಾಂಪ್ರದಾಯಿಕವಾಗಿ ತೆಂಗಿನ ಹೂವಿನ ಗರಿಯನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ತುಳುನಾಡಿನ ಹಲವು ಸಾಂಪ್ರದಾಯಿಕ ಆಚರಣೆಗಳು ಆಧುನಿಕತೆಯ ನಡುವೆ ಮರೆಯಾಗುತ್ತಿದ್ದು, ಅವುಗಳ ಸಂರಕ್ಷಣೆಗಾಗಿ ಎಲ್ಲರೂ ಮುಂದಾಗಬೇಕು ಎಂದು ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ರಾಮಯ್ಯ ಪೂಜಾರಿ ಅವರು ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿ ಸಿದ್ಧಪಡಿಸಿದ ಸುಮಾರು 47 ಬಗೆಯ ಆಟಿ ಖಾದ್ಯಗಳ ವಿಡಿಯೋ ಪ್ರದರ್ಶನಕ್ಕೆ ಡಿಜಿಟಲ್ ಚಾಲನೆ ನೀಡಿದರು. ಮಹಿಳಾ ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಆಟಿ ತಿಂಗಳ ಸಾಂಪ್ರದಾಯಿಕ ಆಹಾರ ಪದ್ಧತಿಯ ಮಹತ್ವವನ್ನು ಅವರು ಶ್ಲಾಘಿಸಿದರು.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ತುಳುನಾಡಿನ ಸಂಪ್ರದಾಯವನ್ನು ಗೌರವಿಸುವುದರ ಜೊತೆಗೆ ಮಹಿಳಾ ಸಂವರ್ಧನೆಗೆ ಒತ್ತು ನೀಡುವ ‘ತಾಯಿ ಆರೋಗ್ಯ–ಆಟಿ ಆಹಾರ’ ಪರಿಕಲ್ಪನೆ ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಚಾಲಕರಾದ ರವೀಂದ್ರ, ರಘುನಾಥ್ ರೈ, ಹರೀಶ್ ಗಟ್ಟಿ, ಟಿಶೋರ್ ಹಾಗೂ ರಂಜನ್ ಶೆಟ್ಟಿ ಅವರನ್ನು ‘ಆಟಿ ಸಮ್ಮಾನ್–2026’ ಹೆಸರಿನಲ್ಲಿ ಗೌರವಿಸಲಾಯಿತು. ಆಸ್ಪತ್ರೆಯ ಸಿಬ್ಬಂದಿಯಿಂದ ಸುಮಾರು 25 ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದಿದ್ದು, ಕಾರ್ಯಕ್ರಮವು ಕೌಟುಂಬಿಕ ವಾತಾವರಣವನ್ನು ಮೂಡಿಸಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಮಾತನಾಡಿ, ತಾಯಿ ಆರೋಗ್ಯ ಕಾಪಾಡುವಲ್ಲಿ ಪೌಷ್ಟಿಕ ಆಹಾರದ ಮಹತ್ವವನ್ನು ಜನರಿಗೆ ತಲುಪಿಸುವುದು ಆರೋಗ್ಯ ಕ್ಷೇತ್ರದ ಪ್ರಮುಖ ಕೈಂಕರ್ಯವಾಗಿದೆ ಎಂದರು. ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಸಿಬ್ಬಂದಿಗೆ ನೆಮ್ಮದಿ ಮತ್ತು ಮನಃಶಾಂತಿ ನೀಡುವುದರ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ನಾಮನಿರ್ದೇಶಿತ ಸದಸ್ಯೆ ಪ್ರಮೀಳಾ ಈಶ್ವರ್, ಗುರು ಬೆಳದಿಂಗಳು ಸೇವಾ ಟ್ರಸ್ಟ್ನ ಮಾಜಿ ಅಧ್ಯಕ್ಷೆ ಶುಭಾ, ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ. ಶ್ರದ್ಧಾ ಶೆಟ್ಟಿ, ಮಕ್ಕಳ ತಜ್ಞ ಡಾ. ನೂತನ್ ಕಾಮತ್, ಶುಶ್ರೂಷಾಧೀಕ್ಷಕಿ ಗೀತಾ, ನರ್ಸಿಂಗ್ ಸೂಪರ್ವೈಸರ್ ಮಲ್ಲಿಕಾ ಹಾಗೂ ಹಿರಿಯ ತಜ್ಞ ಡಾ. ದಯಾನಂದ್ ಉಪಸ್ಥಿತರಿದ್ದರು.

ಅಂಬಿಕಾ, ಜಯಲಕ್ಷ್ಮಿ, ಸವಿತಾ, ಮಹಾಲಕ್ಷ್ಮೀ, ಹೇಮಲತಾ ಹಾಗೂ ವಿನೀತಾ ಕಾರ್ಯಕ್ರಮವನ್ನು ಸಂಯೋಜಿಸಿ ನಿರೂಪಿಸಿದರು. ವಿದ್ಯಾ ಪ್ರಾರ್ಥಿಸಿದರು.


