Breaking
16 Aug 2026, Sun

ಟಿಟಿಪಿ ಸಂಘಟನೆ ಜೊತೆ ಸೇರಿ ದಾಳಿಗೆ ಸಂಚು: ಬೆಂಗಳೂರಿನಲ್ಲಿ ಶಂಕಿತ ಆರೋಪಿ ಬಂಧನ

ಬೆಂಗಳೂರು: ಟಿಟಿಪಿ (ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್) ಸಂಘಟನೆಯೊಂದಿಗೆ ಸಂಪರ್ಕ ಹೊಂದಿ ದಾಳಿಗೆ ಸಂಚು ರೂಪಿಸಿದ್ದಾನೆ ಎಂಬ ಶಂಕೆಯ ಮೇರೆಗೆ ಹೆಬ್ಬಗೋಡಿ ಪೊಲೀಸರು ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.


ಜಿಗಣಿ ನಿವಾಸಿ ಅಸಾಪೂಲ್ ಮಲ್ಲಿಕ್ (25) ಬಂಧಿತ ಆರೋಪಿ. ಜಿಗಣಿಯಲ್ಲಿ ವಾಸವಿದ್ದು ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಈತನ ಚಟುವಟಿಕೆಗಳ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.


ವಿಚಾರಣೆ ವೇಳೆ ಅಸಾಪೂಲ್ ಮಲ್ಲಿಕ್, ಟಿಟಿಪಿ ಸಂಘಟನೆಯ ಸದಸ್ಯನೆಂದು ಹೇಳಲಾಗಿರುವ ಆಫ್ಘಾನಿಸ್ತಾನದ ಇಮ್ರಾನ್ ಅಹಿಂದರ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನ ಸೇನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಆತನ ನೆರವಿನೊಂದಿಗೆ ಆಫ್ಘಾನಿಸ್ತಾನಕ್ಕೆ ತೆರಳಲು ಪಾಸ್ಪೋರ್ಟ್ ಮಾಡಿಸಿಕೊಂಡು ವೀಸಾಗೆ ಅರ್ಜಿ ಸಲ್ಲಿಸಿದ್ದ ಎನ್ನಲಾಗಿದೆ. ಆದರೆ ಕಾರಣಾಂತರಗಳಿಂದ ಆಫ್ಘಾನಿಸ್ತಾನಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ.


ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಪಾಕಿಸ್ತಾನ ಸೇನೆಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಕುರಿತಾದ ಸಂದೇಶಗಳು ಹಾಗೂ ಆಡಿಯೋ ದಾಖಲೆಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *