Breaking
16 Aug 2026, Sun

ಮಂಗಳೂರು ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ಜನರು ಸಲಹೆ ನೀಡಬೇಕು: ಅರುಣ್ ಪ್ರಭಾ ಕೆ.ಎಸ್

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಅಭಿವೃದ್ಧಿಯನ್ನು ಜನರ ಸಹಯೋಗದೊಂದಿಗೆ ಅಚ್ಚುಕಟ್ಟಾಗಿ ಕೈಗೊಳ್ಳಲು ಅಧಿಕಾರಿಗಳು ಉತ್ಸುಕರಾಗಿದ್ದು, ಸ್ಥಳೀಯ ಸಮಸ್ಯೆಗಳು ಹಾಗೂ ಅಗತ್ಯವಿರುವ ಅಭಿವೃದ್ಧಿ ಯೋಜನೆಗಳ ಕುರಿತು ಸಾರ್ವಜನಿಕರು ಸಲಹೆಗಳನ್ನು ನೀಡಬೇಕು ಎಂದು ಮಂಗಳೂರು ಸ್ಮಾರ್ಟ್ ಸಿಟಿಯ ತಾಂತ್ರಿಕ ವಿಭಾಗದ ಚೀಫ್ ಮ್ಯಾನೇಜರ್ ಅರುಣ್ ಪ್ರಭಾ ಕೆ.ಎಸ್. ಹೇಳಿದರು.

ಮೇರಿಹಿಲ್ ಬಳಿಯ ಪೃಥ್ವಿ ಸೇವಾ ಟ್ರಸ್ಟ್ ಹಾಗೂ ವ್ಯಾಲಿವ್ಯೂ ಲೇಔಟ್ ನಾಗರಿಕ ಸಮಿತಿಯ ಸಹಯೋಗದಲ್ಲಿ ಮೇರಿಹಿಲ್‌ನ ಗುರುನಗರದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸ್ಥಳೀಯ ಸಮಸ್ಯೆಗಳು ಹಾಗೂ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿಯನ್ನು ಸಾರ್ವಜನಿಕರು ಅಧಿಕಾರಿಗಳಿಗೆ ನೀಡಿದರೆ, ಅವುಗಳಿಗೆ ಅಗತ್ಯ ಹಣಕಾಸು ಒದಗಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಸ್ವಾತಂತ್ರ್ಯದ ಆಶಯವನ್ನು ಉಳಿಸಿಕೊಳ್ಳಲು ಪರಸ್ಪರರ ಸ್ವತಂತ್ರ ಆಲೋಚನೆಗಳಿಗೆ ಗೌರವ ನೀಡಬೇಕು. ಇತರರ ಬದುಕು, ಮನಸ್ಸು ಹಾಗೂ ಮನೆಗಳ ಮೇಲೆ ಅನಗತ್ಯ ನಿರ್ಬಂಧಗಳನ್ನು ಹೇರದೆ, ವಿವಿಧತೆಯಲ್ಲಿ ಏಕತೆಯನ್ನು ಸಂಭ್ರಮಿಸಬೇಕು ಎಂದರು.

ಮಾಜಿ ವಾಯುಸೇನಾಧಿಕಾರಿ ರಾಮಚಂದ್ರ ಭಟ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು.

ವೇದಿಕೆಯಲ್ಲಿ ಪೃಥ್ವಿ ಸೇವಾ ಟ್ರಸ್ಟ್ ಅಧ್ಯಕ್ಷೆ ಲೋಲಾಕ್ಷಿ ಫರ್ನಾಂಡಿಸ್ ಹಾಗೂ ವ್ಯಾಲಿವ್ಯೂ ನಾಗರಿಕ ಸಮಿತಿ ಅಧ್ಯಕ್ಷ ಜೋ ಟೆಲಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅವರು ವಂದನಾರ್ಪಣೆ ಸಲ್ಲಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಪರಿಸರವಾದಿ ಪಿ. ಕೃಷ್ಣಪ್ಪ ಸೇರಿದಂತೆ ಹಲವು ಗಣ್ಯರು, ಸ್ಥಳೀಯ ನಾಗರಿಕರು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *