Breaking
17 Aug 2026, Mon

ಕರಾವಳಿ ಭಾಗದ ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ ಮಾಡಿಕೊಟ್ಟವರು ವೀರೇಂದ್ರ ಹೆಗ್ಗಡೆ: ಯು.ಟಿ. ಖಾದರ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಯೋಜನೆಯಾದ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ರೂಪಿಸಲಾದ ವಿವಿಧ ಯೋಜನೆಗಳಿಂದ ಕರಾವಳಿ ಭಾಗದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.

ಆ.16ರಂದು ಪರಂಗಿಪೇಟೆ ಸೇವಾಂಜಲಿ ಸಭಾಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ಇದರ ತುಂಬೆ ವಲಯದ ಪ್ರಗತಿಬಂಧು, ಸ್ವ-ಸಹಾಯ ಸಂಘಗಳ ಪರಂಗಿಪೇಟೆ, ಸುಜೀರ್, ತುಂಬೆ ಹಾಗೂ ಕಳ್ಳಿಗೆ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಧನಾ ಸಮಾವೇಶವನ್ನು ಉದ್ಘಾಟಿಸಿ, ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು.

ತಮ್ಮ ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದನ್ನು ಸ್ಮರಿಸಿದ ಸಚಿವರು, ಶ್ರೀ ಕ್ಷೇತ್ರ ಧರ್ಮಸ್ಥಳದ ಎಲ್ಲಾ ಕಾರ್ಯಕ್ರಮಗಳು ಸಮಾಜದ ಸ್ವಾಸ್ಥ್ಯಕ್ಕಾಗಿ ನಡೆಯುತ್ತಿವೆ ಎಂದರು.

ಮಹಿಳೆಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕು. ಖರೀದಿಸುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು. ಆಹಾರ ತಯಾರಿಕಾ ಕೇಂದ್ರಗಳ ಮೇಲೂ ಆರೋಗ್ಯ ಇಲಾಖೆಯ ಮೂಲಕ ನಿಗಾ ವಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಕಾರ ಪಡೆದು ವಿಶೇಷ ಸಾಧನೆ ಮಾಡಿದ ಸಂಘಗಳು ಹಾಗೂ ಸಾಧಕರನ್ನು ಸಚಿವರು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉಳ್ಳಾಕು ಮಗ್ನಂತಾಯಿ ಕ್ಷೇತ್ರ, ಅರ್ಕುಳ ಬೀಡು ಧರ್ಮದರ್ಶಿ ವಜ್ರನಾಭ ಶೆಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆಯ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಖ್ಯಾತ ವಾಗ್ಮಿ ಸಹನಾ ಕುಂದರ್ ಸೂಡ ಉಡುಪಿ, ಪದ್ಮ ಸರ್ವಿಸಸ್ ಬಿ.ಸಿ.ರೋಡ್‌ನ ಮಾಲಕ ಐತಪ್ಪ ಆಳ್ವ ಸುಜೀರುಗುತ್ತು, ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್ ಬ್ರಹ್ಮರಕೂಟ್ಲು, ಮಾಜಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ, ಶ್ರೀ ರಾಮ ಪ್ರೌಢಶಾಲೆ ಅರ್ಕುಳದ ಮುಖ್ಯ ಶಿಕ್ಷಕ ದೇವದಾಸ್, ಜನಜಾಗೃತಿ ವೇದಿಕೆ ಸದಸ್ಯರಾದ ಸದಾನಂದ ಆಳ್ವ ಕಂಪ, ಭಾಸ್ಕರ ಚೌಟ, ತಾರಾನಾಥ ಕೊಟ್ಟಾರಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಸಮೀರಾ ಅಮನ್ ಗಾರ್ಮೆಂಟ್ಸ್ ಮೆಲ್ಕಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪರಂಗಿಪೇಟೆ ಒಕ್ಕೂಟ ಸೇವಾ ಪ್ರತಿನಿಧಿ ಅಮಿತಾ ಸಾಧನಾ ವರದಿ ವಾಚಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಗೋಪಾಲಕೃಷ್ಣ ವಂದಿಸಿದರು.

ಒಕ್ಕೂಟ ಸೇವಾ ಪ್ರತಿನಿಧಿಗಳಾದ ಅಮಿತಾ, ಮಲ್ಲಿಕಾ, ಅನಿತಾ, ತುಳಸಿ, ಕುಸುಮಾವತಿ, ಪ್ರತಿಭಾ ಹಾಗೂ ವನಿತಾ ಸಹಕರಿಸಿದರು. ಕಾರ್ಯಕ್ರಮದಲ್ಲಿ ನಾಲ್ಕು ಒಕ್ಕೂಟಗಳ ನೂತನ ಅಧ್ಯಕ್ಷರು, ಪದಾಧಿಕಾರಿಗಳು, ನಿಕಟಪೂರ್ವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸ್ವ-ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *