ಬೆಳ್ತಂಗಡಿ: ಪಶ್ಚಿಮ ಘಟ್ಟ ಸೇರಿದಂತೆ ಅರಣ್ಯ ಸಂರಕ್ಷಣೆಯನ್ನು ಸ್ವಾಗತಿಸುತ್ತೇವೆ. ಆದರೆ ಜನರ ಬದುಕಿಗೆ ತೊಂದರೆ ಉಂಟುಮಾಡುವ ಕಸ್ತೂರಿರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ವರದಿಯ ವಿರುದ್ಧ ಜನಜಾಗೃತಿ ಮೂಡಿಸುವುದರ ಜೊತೆಗೆ ತೀವ್ರ ಸ್ವರೂಪದ ಹೋರಾಟಕ್ಕೆ ಜನರು ಮುಂದಾಗಬೇಕು ಎಂದು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ತಾಲೂಕು ಸಂಚಾಲಕ ರಕ್ಷಿತ್ ಶಿವರಾಂ ಕರೆ ನೀಡಿದರು.

ನೆರಿಯ ಗ್ರಾಮ ಪಂಚಾಯತ್ ಆವರಣದಲ್ಲಿ ಭಾನುವಾರ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೆರಿಯ ಗ್ರಾಮ ಸಮಿತಿ ವತಿಯಿಂದ ನಡೆದ ಜನಜಾಗೃತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಮಣ್ಣಿನ ಮೂಲನಿವಾಸಿಗಳು ಸೇರಿದಂತೆ ಜನಸಾಮಾನ್ಯರ ಆಚರಣೆ, ಸಂಸ್ಕೃತಿ, ಧಾರ್ಮಿಕತೆಯನ್ನು ನಾಶ ಮಾಡುವ ಈ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಜನಸಾಮಾನ್ಯರ ಜೀವನದ ಜೊತೆಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ, ವರದಿಯನ್ನು ಜಾರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು 2014 ರಿಂದ 6 ಬಾರಿ ಕಸ್ತೂರಿರಂಗನ್ ವರದಿಯನ್ನು ರಾಜ್ಯ ಸರ್ಕಾರಗಳು ವಿರೋಧಿಸಿದರೂ ಮತ್ತೆ 7 ನೇ ಬಾರಿ ಅಧಿಸೂಚನೆ ಹೊರಡಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟ್ ಅಧ್ಯಕ್ಷ ಯು.ಸಿ ಪೌಲೋಸ್ ಮಾತನಾಡಿ ಕಸ್ತೂರಿರಂಗನ್ ವರದಿ ವಿರುದ್ಧ ಜಾತಿ, ಧರ್ಮ, ಪಕ್ಷದ ಭೇದ ಮರೆತು ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದರು.

ಗಂಡಿಬಾಗಿಲು ಸಂತ ಥೋಮಸ್ ಚರ್ಚ್ ನ ಧರ್ಮಗುರು ರೆ.ಫಾ. ಬಿನೋಯ್ ರವರು ಮಾತನಾಡಿ ವರದಿಯಲ್ಲಿ ಹಲವು ಜನ ವಿರೋಧಿ ಅಂಶಗಳಿದ್ದು, ಇಂತಹ ವರದಿಯಿಂದ ಜನಸಾಮಾನ್ಯರ ಬದುಕುವ ಹಕ್ಕನ್ನು ಕಸಿಯುವ ಸಾಧ್ಯತೆಯಿದೆ, ಇದರ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು.

ನೆರಿಯ ಬದ್ರಿಯಾ ಜುಮ್ಮಾ ಮಸೀದಿ ಧರ್ಮಗುರು ಮಹಮ್ಮದ್ ಸರ್ವಾಣಿ ಮಾತನಾಡಿ ಇಂತಹ ಜನವಿರೋಧಿ ವರದಿಯ ವಿರುದ್ಧ ನಾವೆಲ್ಲರೂ ಮನುಷ್ಯರೆಂಬ ಸೌಹಾರ್ದ ಹೋರಾಟದ ಅಗತ್ಯವಿದೆ. ಜಾತಿ, ಧರ್ಮವನ್ನು ಹೊರಗಿಟ್ಟು ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದರು.

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಬಿ.ಎಂ ಭಟ್ ಮಾತನಾಡಿ ವರದಿಯು ಅತ್ಯಂತ ಅವೈಜ್ಞಾನಿಕವಾಗಿದ್ದು, ಜನಸಾಮಾನ್ಯರ ವಿರೋಧವನ್ನು ಬಲಪಡಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ನಿರಂತರವಾಗಿ ಜನರ ವಿರುದ್ಧ ಕಾನೂನು, ಕಾಯ್ದೆ ಜಾರಿ ಮಾಡಿ ಜನರ ಜೀವನದಲ್ಲಿ ಆಟವಾಡುತ್ತಿದೆ. ಇಂತಹ ಸರ್ಕಾರದ ವಿರುದ್ಧ ಜನರು ಇನ್ನಷ್ಟು ಪ್ರಬಲ ಹೋರಾಟಕ್ಕೆ ಮುಂದಾಗಬೇಕು ಎಂದರು.

ಸಮಿತಿಯ ಗ್ರಾಮ ಸಮಿತಿ ಅಧ್ಯಕ್ಷ ಪಿ.ಕೆ. ರಾಜನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಹ ಸಂಚಾಲಕರಾದ ಲಕ್ಷ್ಮಣ ಆಲಂಗಾಯಿ, ಜಯಾನಂದ ಪಿಲಿಕಲ, ಲಕ್ಷ್ಮಣ ಗೌಡ, ಪಿ.ಟಿ. ಸೆಬಾಸ್ಟಿಯನ್ ಕಳೆಂಜ, ಶೇಖರ್ ಲಾಯಿಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಸೇರಿದಂತೆ ವಿವಿಧ ದೇವಸ್ಥಾನಗಳ ಹಾಗೂ ಆಡಳಿತ ಮಂಡಳಿಗಳ ಪ್ರಮುಖರಾದ ಜಯದೇವ್, ಕೃಷ್ಣ ಬಾಂಜಾರು, ರುಕ್ಮಯ್ಯ ಗೌಡ, ಗಿರೀಶ್ ನೆಕ್ಕರೆ, ಮಂಜಪ್ಪ ಕೋಲೋಡಿ, ಸುಧಾಕರ ಆಲಂಗಾಯಿ, ಕಾಂತಪ್ಪ ಆಲಂಗಾಯಿ, ಶಂಕರ್ ಅಂಬಟೆಮಲೆ, ಕು. ಪುಷ್ಪ ಕಾಟಾಜೆ, ವಿ.ಡಿ. ಥೋಮಸ್, ರಮೇಶ್ ಕೆ.ಎಸ್. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಗ್ರಾಮ ಸಮಿತಿ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ ನಿರೂಪಿಸಿ, ತಾಲೂಕು ಸಹ ಸಂಚಾಲಕ ಬಿ.ಅಶ್ರಪ್ ನೆರಿಯ ವಂದಿಸಿದರು.




