Breaking
17 Aug 2026, Mon

ಭಾರತ್ ಜೋಡೋ ಯುವ ಸಂಘ ಸದಸ್ಯತ್ವ ನೋಂದಣಿ ಮಾಹಿತಿ ಶಿಬಿರ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಭಾರತ್ ಜೋಡೋ ಯುವ ಸಂಘ’ದ ಸದಸ್ಯತ್ವ ನೋಂದಣಿ ಕುರಿತು ಮಾಹಿತಿ ಶಿಬಿರ ಕುಕ್ಕೇಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಭಾನುವಾರ(ಆ.16) ನಡೆಯಿತು.

ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲ, ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಸಂಘವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದರು.

ಪ್ರತಿ ಸಂಘಕ್ಕೆ ರಾಜ್ಯ ಸರ್ಕಾರದಿಂದ ತಲಾ ರೂ.10 ಲಕ್ಷ ಅನುದಾನ ಒದಗಿಸಲಾಗುವುದು. ಸಮುದಾಯದ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ, ಕ್ರೀಡೆ ಹಾಗೂ ಕೌಶಲ್ಯಾಭಿವೃದ್ಧಿ ಮೂಲಕ ಯುವಜನರನ್ನು ಸಬಲೀಕರಣಗೊಳಿಸಿ, ತಳಮಟ್ಟದ ಆಡಳಿತದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಯುವಜನರನ್ನು ಒಳಗೊಂಡ ಬಲಿಷ್ಠ ಸಮುದಾಯವನ್ನು ರೂಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

16ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಸದಸ್ಯತ್ವ ಪಡೆಯಲು ಅವಕಾಶವಿದ್ದು, ಯುವಜನರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ, ಲೋಕಸಭಾ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ನಡೆಸಿದ ಭಾರತ್ ಜೋಡೋ ಕಾಲ್ನಡಿಗೆಯ ಮೂಲಕ ಸೌಹಾರ್ದ ಭಾರತ ನಿರ್ಮಾಣಕ್ಕೆ ಮುಂದಾಗಿದ್ದರು. ಆ ಐತಿಹಾಸಿಕ ಕಾರ್ಯಕ್ರಮದ ನೆನಪನ್ನು ಶಾಶ್ವತವಾಗಿ ಉಳಿಸುವ ಹಾಗೂ ಜಾತಿ-ಧರ್ಮದ ಭೇದಭಾವ ಮರೆತು ಮನಸ್ಸುಗಳನ್ನು ಬೆಸೆಯುವ ಆಶಯದೊಂದಿಗೆ ರಾಜ್ಯ ಸರ್ಕಾರ ಭಾರತ್ ಜೋಡೋ ಯುವ ಸಂಘ ಸ್ಥಾಪಿಸಲು ಮುಂದಾಗಿದೆ ಎಂದರು.

ಕುಕ್ಕೇಡಿ ಹಾಗೂ ನಿಟ್ಟಡೆ ಗ್ರಾಮದ ಯುವಜನರು ಯೋಜನೆಯ ಸದುಪಯೋಗ ಪಡೆದುಕೊಂಡು ಸೌಹಾರ್ದ ಗ್ರಾಮ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರು ಕರೆ ನೀಡಿದರು. ಕುಕ್ಕೇಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಸ್ವಾಗತಿಸಿದರು. ಪಂಚಾಯತ್ ಕಾರ್ಯದರ್ಶಿ ಕುಂಞ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹೆಚ್.ಎಲ್. ಉದಯ ಕುಮಾರ್, ಪಂಚಾಯತ್ ಸಿಬ್ಬಂದಿಗಳಾದ ಆನಂದ ಗೋಳಿಯಂಗಡಿ, ಗಣೇಶ್ ಕುಕ್ಕೇಡಿ, ಗ್ರಾಮೀಣ ದಸರಾ ಕ್ರೀಡಾಕೂಟ ಅಧ್ಯಕ್ಷ ಸತೀಶ್ ಅಂಚನ್ ಕುಕ್ಕೇಡಿ, ದಸಂಸ ಸಂಚಾಲಕ ಹರೀಶ್ ಪಂಡಿಜೆ, ಪ್ರಮುಖರಾದ ಸಂತೋಷ್ ಪೂಜಾರಿ, ವಿಠ್ಠಲ ಪೂಜಾರಿ, ರವಿ ಆಚಾರ್ಯ, ಜಯಂತ್ ಕೋಟ್ಯಾನ್, ಸ್ಟೀವನ್ ಮೋನಿಸ್ ನೆಕ್ಕರ್ಜೆ, ಸಿಲ್ವೆಸ್ಟರ್ ಸೆರವೋ ಪೆರ್ಮುಡ, ನಾರಾಯಣ ಪೂಜಾರಿ ಭೂತೇರು, ಶೃತಿ ಆಚಾರ್ಯ, ಶೃತಿ ದೇವಾಡಿಗ, ಅಶ್ವಿನಿ ಕೋಡಂಗೆದಕೋಡಿ, ಪದ್ಮನಾಭ ಅಂಬಗುಡ್ಡೆ, ಶಾಂತಿ ಅಂಬೇಡ್ಕರ್ ನಗರ, ಅಶ್ವಿನ್ ಕುಮಾರ್ ಜೈನ್ ಮೇಗಿನ ಕುಕ್ಕೇಡಿಗುತ್ತು, ರಾಜೇಂದ್ರ ಮಾಸ್ಟರ್ ಕೊಡಿಕೊಡಂಗೆ, ಉಮೇಶ್ ಪಾಣೂರು, ಸಂಧ್ಯಾ ಕುಕ್ಕೇಡಿ, ಸಕೇತಾ ಕುಕ್ಕೇಡಿ, ಸಾಹುಲ್ ಹಮೀದ್ ಪಾಣೂರು, ನವಾಜ್ ಉಳ್ತೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *