ಬೆಳ್ತಂಗಡಿಯ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ಸಂಚಾಲನ ಸಮಿತಿ ವತಿಯಿಂದ ನಡೆದ ಗ್ರಾಮ ಪದಾಧಿಕಾರಿಗಳ ಸಭೆಯಲ್ಲಿ ಹಿರಿಯ ಸಾಮಾಜಿಕ ಚಿಂತಕ ಹಾಗೂ ಪತ್ರಕರ್ತ ಶಿಭಿ ಧರ್ಮಸ್ಥಳ ಮಾತನಾಡಿ, ಅನ್ಯಾಯ, ದೌರ್ಜನ್ಯ ಮತ್ತು ಮೂಢನಂಬಿಕೆ ವಿರುದ್ಧ ವೈಚಾರಿಕ ಹಾಗೂ ವೈಜ್ಞಾನಿಕ ಚಳವಳಿಯನ್ನು ಕಟ್ಟುವ ಅಗತ್ಯವಿದೆ ಎಂದು ಹೇಳಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತ, ದಲಿತ ಹಾಗೂ ಕಾರ್ಮಿಕ ಚಳವಳಿಗಳು ಬಲವಾಗಿ ಬೆಳೆದಿದ್ದು, ಇದರ ಜೊತೆಗೆ ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ಚಳವಳಿಯೂ ಅಗತ್ಯವಾಗಿದೆ ಎಂದರು. ಮೂಢನಂಬಿಕೆ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಅಧ್ಯಯನ ಶಿಬಿರಗಳ ಮೂಲಕ ಕಾರ್ಯಕರ್ತರನ್ನು ವೈಚಾರಿಕವಾಗಿ ಬಲಪಡಿಸಬೇಕೆಂದು ಸಲಹೆ ನೀಡಿದರು.

ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ಸವಾಲು ಎದುರಿಸುತ್ತಿದ್ದು, ಸಮಾಜದಲ್ಲಿ ವಿಭಜನೆ ಉಂಟುಮಾಡುವ ಪ್ರವೃತ್ತಿಗಳ ವಿರುದ್ಧ ಜನಜಾಗೃತಿ ಅಗತ್ಯವಾಗಿದೆ ಎಂದರು. ಸಂವಿಧಾನದ ಆಶಯಗಳನ್ನು ಉಳಿಸಲು ಗ್ರಾಮೀಣ ಮಟ್ಟದಿಂದಲೇ ಸಂಘಟಿತ ಕಾರ್ಯಾಚರಣೆ ಅಗತ್ಯ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಂಚಾಲಕ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಬೆಳ್ತಂಗಡಿ ತಾಲೂಕಿನಾದ್ಯಂತ ಮಾನವ ಬಂಧುತ್ವ ವೇದಿಕೆಯ ಘಟಕಗಳನ್ನು ವಿಸ್ತರಿಸಿ, ಧರ್ಮ ಮೀರಿ ಮನುಷ್ಯನನ್ನು ಪ್ರೀತಿಸುವ ಸಮಾಜ ನಿರ್ಮಾಣಕ್ಕೆ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು. ಶೇಖರ್ ಎಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.








