Breaking
20 Sep 2026, Sun

ಪರಿಸರದ ನಾಶಕ್ಕೆ ಮಾನವನ ಆಸೆ-ದುರಾಸೆಗಳೇ ಕಾರಣ: ಅನಿಲ್ ಪಂಡಿತ್

ಕಲ್ಲಡ್ಕ: ಮಾನವನ ಅತಿಯಾದ ಆಸೆ ಮತ್ತು ದುರಾಸೆಗಳ ಸರಮಾಲೆಯೇ ಪರಿಸರ ನಾಶಕ್ಕೆ ಪ್ರಮುಖ ಕಾರಣವಾಗಿದ್ದು, ಸ್ವಾರ್ಥಪರ ಜೀವನಶೈಲಿಯಿಂದ ಪ್ರಕೃತಿಯ ಸಮತೋಲನ ಹದಗೆಡುತ್ತಿದೆ ಎಂದು ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್ ಹೇಳಿದರು.

ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಮಜಿ ವೀರಕಂಭದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ) ಹಾಗೂ ಜವಾಹರ ಬಾಲ್ ಮಂಚ್, ದಕ್ಷಿಣ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ, ವನಮಹೋತ್ಸವ ಹಾಗೂ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಅಕ್ಷರದಿಂದ ಸಂಸ್ಕಾರ ಬೆಳೆಯಬೇಕು, ಅಂಧಕಾರ ದೂರವಾಗಬೇಕು. ಆದರೆ ಅಹಂಕಾರ ಬೆಳೆಯಬಾರದು. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು ಒಂದು ಗಿಡ ನೆಟ್ಟು ಅದನ್ನು ಜೀವನಪರ್ಯಂತ ಪೋಷಿಸಿದರೆ ಬದುಕಿಗೆ ಅರ್ಥ ಸಿಗುತ್ತದೆ. ಪರಿಸರದಿಂದ ನಾವು ಇದ್ದೇವೆಯೇ ಹೊರತು, ನಮ್ಮಿಂದ ಪರಿಸರ ಅಲ್ಲ. ಪರಿಸರ ಮುನಿದರೆ ನಮ್ಮ ಬದುಕು ಕ್ಷಣಾರ್ಧದಲ್ಲಿ ಕೊನೆಗೊಳ್ಳಬಹುದು,” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ, ಜವಾಹರ ಬಾಲ್ ಮಂಚ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷೆ ಹಾಗೂ ಕಿತ್ತೂರು ಚೆನ್ನಮ್ಮ ರಾಜ್ಯ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೈಲಜಾ ರಾಜೇಶ್ ಮಾತನಾಡಿ, ಪ್ರಕೃತಿ ನಾಶದಿಂದ ಅನೇಕ ವಿಕೋಪಗಳು ಸಂಭವಿಸುತ್ತಿದ್ದು, ಪರಿಸರ ಶಿಕ್ಷಣದ ಮೂಲಕ ಪ್ರಜ್ಞಾವಂತ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

“ಪ್ರಕೃತಿ ನಮ್ಮ ಜೀವನಕ್ಕೆ ನೀಡುವ ಪ್ರತಿಯೊಂದು ಕೊಡುಗೆಯ ಮೌಲ್ಯವನ್ನು ಅರಿತಾಗ ಪರಿಸರ ಪ್ರೇಮವು ಕೇವಲ ಒಂದು ನಿಲುವಾಗಿರದೆ ನಮ್ಮ ನಡವಳಿಕೆಯಲ್ಲಿ ಮೂಡುವ ಸಂಸ್ಕಾರವಾಗುತ್ತದೆ. ಭೂಮಿಯನ್ನು ಕಾಪಾಡುವುದು ಯಾವುದೇ ಒಂದು ಸಂಸ್ಥೆಯ ಹೊಣೆಗಾರಿಕೆ ಅಲ್ಲ. ಪ್ರತಿಯೊಬ್ಬರ ಜಾಗೃತಿ, ಜವಾಬ್ದಾರಿ ಹಾಗೂ ದಿನನಿತ್ಯದ ಸಣ್ಣ ಸಣ್ಣ ಕ್ರಮಗಳಿಂದ ದೊಡ್ಡ ಬದಲಾವಣೆ ಸಾಧ್ಯ,” ಎಂದು ಅವರು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳಿಗಾಗಿ ಸ್ವಚ್ಛ ಮತ್ತು ಸುಂದರ ಪರಿಸರ ವಿಷಯದ ಕುರಿತು ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ವಾತ್ಸಲ್ಯ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸದಸ್ಯೆ ಇಂದಿರಾ, ಶಾಲಾ ನಾಯಕ ಮೊಹಮ್ಮದ್ ಹಾರೂನ್ ಫರ್ಹಾನ್ ಹಾಗೂ ಹಿರಿಯ ವಿದ್ಯಾರ್ಥಿನಿ ಲಿಖಿತಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸ್ ಸ್ವಾಗತಿಸಿದರು. ಶಿಕ್ಷಕಿ ಸಂಪ್ರಿಯ ವಂದಿಸಿದರು. ಹಿರಿಯ ಶಿಕ್ಷಕಿ ಸಂಗೀತ ಶರ್ಮಾ ಪಿ.ಜಿ. ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಶಿಕ್ಷಕ ವೃಂದ ಸಹಕರಿಸಿತು.

Leave a Reply

Your email address will not be published. Required fields are marked *