ಉಡುಪಿ ಜಿಲ್ಲೆಯಲ್ಲಿ ಅಕ್ರಮ ದನ ಸಾಗಣೆ ಪ್ರಕರಣವನ್ನು ಪಡುಬಿದ್ರಿ ಪೊಲೀಸರು ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಾಪು ತಾಲೂಕಿನ ನಡ್ಸಾಲು ಗ್ರಾಮದ ಇಸ್ಮಾಯಿಲ್(42) ಹಾಗೂ ಮೂಲ್ಕಿ ತಾಲೂಕಿನ ಕರ್ನಿರೆ ಗ್ರಾಮದ ಮೊಹಮ್ಮದ್(62) ಎಂದು ಗುರುತಿಸಲಾಗಿದೆ.

ಮೇ 18ರಂದು ಬೆಳಗಿನ ಜಾವ ಬೆಳಿಗ್ಗೆ 6.40 ರ ಸುಮಾರಿಗೆ ಕಾರ್ಕಳದಿಂದ ಪಡುಬಿದ್ರಿ ಕಡೆಗೆ ಸರಕು ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಐ ಅನಿಲ್ ಕುಮಾರ್ ಟಿ. ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಪಡುಬಿದ್ರಿ ಠಾಣಾ ವ್ಯಾಪ್ತಿಯ ಇನ್ನ ಗ್ರಾಮದ ಕಾಜನಡ್ಕ ಬಳಿ KA-19-A-6151 ಸಂಖ್ಯೆಯ 407 ಟರ್ಬೊ ವಾಹನವನ್ನು ತಡೆದರು.

ತಪಾಸಣೆ ವೇಳೆ ಮೂರು ದನಗಳನ್ನು ಪ್ರಾಣಿ ಕಲ್ಯಾಣ ನಿಯಮಗಳನ್ನು ಉಲ್ಲಂಘಿಸಿ ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಪ್ರಮುಖ ಆರೋಪಿ ಇಸ್ಮಾಯಿಲ್ ವಿರುದ್ಧ ಬರ್ಕೆ, ಮುಲ್ಕಿ, ಬಂಟ್ವಾಳ, ಸುರತ್ಕಲ್, ಕಾರ್ಕಳ ಹಾಗೂ ಹೆಬ್ರಿ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಗೋ ಸಾಗಣೆ ಮತ್ತು ಗೋಹತ್ಯೆ ನಿಷೇಧ ಪ್ರಕರಣಗಳು ದಾಖಲಾಗಿವೆ.

ಪೊಲೀಸರು ವಾಹನ ಹಾಗೂ ರಕ್ಷಿಸಲಾದ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು, ಒಟ್ಟು ಮೌಲ್ಯ ಸುಮಾರು 4 ಲಕ್ಷ 25 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಅನಿಲ್ ಕುಮಾರ್ ಟಿ.ನಾಯಕ್ ನೇತೃತ್ವದಲ್ಲಿ ಎಎಸ್ಐ ದಿನಕರ್, ಹೆಚ್.ಸಿ.ನವೀನ್ ಕುಮಾರ್, ಹೆಚ್.ಸಿ.ಅಶ್ವಿನ್ ಕುಮಾರ್, ಹೆಚ್.ಸಿ.ಕೃಷ್ಣ ಪ್ರಸಾದ್, ಪಿ.ಸಿ.ಸಂದೇಶ್, ಪಿ.ಸಿ.ಪ್ರಭು ಅಥಣಿ, ಪಿ.ಸಿ.ರಾಘವೇಂದ್ರ, ಪಿ.ಸಿ.ಅಣ್ಣಪ್ಪ ಮತ್ತು ಪಿ.ಸಿ.ಶ್ರೀಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.







