ಸಿದ್ದಕಟ್ಟೆ: ಪ್ರಸ್ತುತ ಕಾಲಮಾನದ ಭವಿಷ್ಯದ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಸಂಸ್ಕಾರಯುತವಾದ ಜೀವನ ಶಿಕ್ಷಣದ ಕಲಿಯುವಿಕೆ ಅತ್ಯಾವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರು ಗಮನ ಹರಿಸಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಮಕ್ಕಳು ತಮ್ಮನ್ನು ಸಾಕಿ ಸಲಹಿದ ತಂದೆ, ತಾಯಿಯನ್ನು ಹಾಗೂ ಗುರು ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಶಿಸ್ತು, ತಾಳ್ಮೆಯಿಂದ ಸಾಧಿಸುವ ಹಂಬಲವಿದ್ದರೆ ಜೀವನದಲ್ಲಿ ಬಹುಬೇಗನೆ ಯಶಸ್ವಿಯಾಗಲು ಸಾಧ್ಯ ಎಂದೂ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಭಾಕರ ಪ್ರಭು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ಧಕಟ್ಟೆ ಇಲ್ಲಿನ 2024-25ನೇ ಸಾಲಿನ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರಾಜೀವಿ ಪೂಜಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಗಬೆಟ್ಟು ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಶ್ರೀ ಸುರೇಶ್ ಕುಲಾಲ್, ಸದಸ್ಯರಾದ ಶ್ರೀ ಸಂದೇಶ್ ಶೆಟ್ಟಿ ಪೊಡುಂಬ, ಶ್ರೀ ಉದಯ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಶ್ರೀ ನಿತ್ಯಾನಂದ ಪೂಜಾರಿ ಕೆಂತಲೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ನೋಣಯ್ಯ ಶೆಟ್ಟಿಗಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ. ಸುದೀಪ್ ಕುಮಾರ್, ಶ್ರೀ ಉಮಾನಾಥ ನಾಯಕ್, ಶ್ರೀ ವೀರಪ್ಪಗೌಡ, ಶ್ರೀಮತಿ ಮಂದಾರತಿ ಎಸ್ ಶೆಟ್ಟಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಾಂಶುಪಾಲರಾದ ಶ್ರೀ ಉದಯಕುಮಾರ್ ವರದಿ ವಾಚಿಸಿದರು. ಉಪನ್ಯಾಸಕರಾದ ಶ್ರೀ ಶ್ರೀನಿವಾಸ ನಾಯಕ್ ಸ್ವಾಗತಿಸಿದರು, ವಿದ್ಯಾರ್ಥಿ ನಾಯಕ ಶ್ರೀ ಲತೀಶ್ ವಂದಿಸಿದರು ಹಾಗೂ ಉಪನ್ಯಾಸಕರಾದ ಶ್ರೀ ಸಂಜಯ್ ಬಿ ಎಸ್ ಕಾರ್ಯಕ್ರಮ ನಿರೂಪಿಸಿದರು.