Breaking
2 Mar 2026, Mon

ಧಾರ್ಮಿಕ ಉತ್ಸವ ಆಚರಣೆಗಳ ಮೂಲಕ ಸಶಕ್ತ ಸಮಾಜ ನಿರ್ಮಾಣವಾಗಲಿ: ಗುರುಪುರ ವಜ್ರದೇಹಿ ಮಠದ ಪೀಠಾಧಿಪತಿ ವಜ್ರದೇಹಿ ಶ್ರೀ

ಬಂಟ್ವಾಳ: ಹಿಂದೂ ಸಮಾಜ ಸದೃಢವಾದರೆ ಮಾತ್ರ ದೇಶ ಬಲಿಷ್ಠವಾಗುತ್ತದೆ. ಜಾತಿ, ಮತ, ಮೇಲು-ಕೀಳು, ಬಡವ-ಬಲ್ಲಿದ ಎಂಬ ತಾರತಮ್ಯಗಳಿಂದ ಸಮಾಜ ದಾರಿ ತಪ್ಪುತ್ತಿರುವ ಇಂದಿನ ಸಂದರ್ಭದಲ್ಲೆಲ್ಲರೂ ಐಕ್ಯತೆಯಿಂದ ಸಂಘಟಿತರಾಗಿ ಜಾಗೃತಿಯಾಗಬೇಕು. ಧಾರ್ಮಿಕ ಉತ್ಸವಗಳು ಸಶಕ್ತ ಸಮಾಜ ನಿರ್ಮಾಣಕ್ಕೆ ಪೂರಕವಾಗಲಿ ಎಂದು ಗುರುಪುರ ವಜ್ರದೇಹಿ ಮಠದ ಪೀಠಾಧಿಪತಿ ಶ್ರೀ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಅವರು ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ರಾಮಲ್ ಕಟ್ಟೆ ಗೋಮಾಯಿ ಶ್ರೀ ನಾಗಬ್ರಹ್ಮ–ಶ್ರೀ ನಾಗಕನ್ನಿಕೆ ದೇವಸ್ಥಾನದ 39ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಮಾರ್ಚ್ 1ರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಮಾತನಾಡಿ, “ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ನಾವು ಬೇಧಭಾವ ಬಿಟ್ಟು ಹಿಂದೂ ಎನ್ನುವ ಮನೋಭಾವದಿಂದ ಸಾಮೂಹಿಕ ಚಿಂತನೆ ನಡೆಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟಗಳಿಗೆ ಸ್ಪಂದಿಸುವ ಗುಣ ನಮ್ಮದಾಗಲಿ. ನಮ್ಮ ಗಳಿಕೆಯ ಒಂದು ಅಂಶವನ್ನು ಸಮಾಜಕ್ಕೆ ಅರ್ಪಿಸೋಣ” ಎಂದು ಹೇಳಿದರು.

ವಿ.ಹಿಂ.ಪ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ, ಈ ಭೂಮಿ ದೇವಭೂಮಿ, ಮಾತೃಭೂಮಿ; ಇಲ್ಲಿ ಹುಟ್ಟಿದ ನಾವು ಧನ್ಯರು. ಪ್ರತಿಯೊಂದರಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು. ಸಂಘಟಿತರಾಗಿ ಧಾರ್ಮಿಕ ಆಚರಣೆಗಳ ಮೂಲಕ ದೇಶ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸೋಣ ಎಂದರು.

ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ, ನಾಗ ದೇವರು ಜ್ಞಾನ, ಸಂಪತ್ತು ಮತ್ತು ನಾಯಕತ್ವದ ಪ್ರತೀಕ. ಆರಾಧನೆಯ ಮೂಲಕ ಕಲೆಗಳನ್ನು ಉಳಿಸಿ ಮನಸ್ಸಿನ ವಿಕಾಸ ಮಾಡಬೇಕು. ಧಾರ್ಮಿಕ ಚಟುವಟಿಕೆಗಳೊಂದಿಗೆ ಕೌಟುಂಬಿಕ ಮೌಲ್ಯಗಳನ್ನು ಬಲಪಡಿಸೋಣ ಎಂದರು.

ಈ ಸಂದರ್ಭದಲ್ಲಿ ಮೋನಪ್ಪ ಮಜಿ, ಗಣೇಶ್ ಸುವರ್ಣ ತುಂಬೆ, ಸುಮಿತ್ ಸಾಲ್ಯಾನ್, ಸದಾಶಿವ ಡಿ ತುಂಬೆ, ವಸಂತ್ ಗಾಣದ ಕೊಟ್ಟಿಗೆ, ಅಶೋಕ್ ಕುಲಾಲ್, ಕಿಶೋರ್ ಕುಮಾರ್, ಸಂಜೀವ ಪೂಜಾರಿ, ಸೋಮಪ್ಪ ಪೂಜಾರಿ, ಪ್ರದೀಪ್ ಬೊಳ್ಳಾರಿ, ಇಂದಿರಾ ಪ್ರದೀಪ್ ಬೊಳ್ಳಾರಿ, ಪ್ರಿಯದರ್ಶಿನಿ ಸುನೀಲ್ ದಾರಿಬಾಗಿಲು, ಕಾಶೀನಾಥ್ ಗಾಣದಲಚ್ಚಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಾಧಕರಾದ ಚಂದ್ರಹಾಸ ತುಂಬೆ, ಬೇಬಿ ತುಂಬೆ, ಸಿದ್ದಪ್ಪ ಎಸ್ ಅಂಗಡಿ ಹಾಗೂ ಪ್ರಿಯದರ್ಶಿನಿ ಸುನೀಲ್ ದಾರಿಬಾಗಿಲು ಅವರನ್ನು ಸನ್ಮಾನಿಸಲಾಯಿತು. ಭಜರಂಗದಳದ ವಿಜೇತ್ ಸ್ವಾಗತಿಸಿದರು. ಧನ್ಯಶ್ರೀ ತುಂಬೆ ಧನ್ಯವಾದ ಸಲ್ಲಿಸಿದರು. ಕಲಾವಿದ ಹೆಚ್.ಕೆ. ನೈನಾಡು ಕಾರ್ಯಕ್ರಮ ನಿರೂಪಣೆ ಮಾಡಿದ್ದು, ಯೋಗೀಶ್ ಬೊಳ್ಳಾರಿ ಸಹಕರಿಸಿದರು.

ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಭಜನಾ ಸಂಕೀರ್ತನೆ, ಸ್ಥಳೀಯ ಪ್ರತಿಭೆಗಳ ನೃತ್ಯ ವೈವಿಧ್ಯ ಹಾಗೂ “ಜೋಡು ಜೀಟಿಗೆ” ನಾಟಕ ಪ್ರದರ್ಶನಗೊಂಡಿತು.

Leave a Reply

Your email address will not be published. Required fields are marked *