Breaking
28 Feb 2026, Sat

ಮಾ. 3ರಂದು ಬ್ರಹ್ಮರಕೊಟ್ಲು ಟೋಲ್ ಗೇಟ್ ಮುಚ್ಚುವಂತೆ ಪ್ರತಿಭಟನೆ

ಬಂಟ್ವಾಳ: ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ರಚಿಸಲಾದ ‘ಬ್ರಹ್ಮರಕೊಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ’ ನೇತೃತ್ವದಲ್ಲಿ ಬ್ರಹ್ಮರಕೊಟ್ಲು ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಮಾ. 3ರಂದು ಸಾಮೂಹಿಕ ಧರಣಿ ನಡೆಸಲಾಗುವುದು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬಿಸಿರೋಡಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎರಡು ಟೋಲ್ ಗೇಟ್‌ಗಳ ನಡುವಿನ ಕನಿಷ್ಠ ಅಂತರ, ಸರ್ವೀಸ್ ರಸ್ತೆ ವ್ಯವಸ್ಥೆ ಹಾಗೂ ತಡೆಯಿಲ್ಲದ ಸಂಚಾರಕ್ಕೆ ಅವಕಾಶ ನೀಡುವಂತೆ ಇರುವ ಪ್ರಮುಖ ನಿಯಮಗಳನ್ನು ಉಲ್ಲಂಘಿಸಿ ಬ್ರಹ್ಮರಕೊಟ್ಲು ಟೋಲ್ ಗೇಟ್‌ನಲ್ಲಿ ಸುಂಕ ಸಂಗ್ರಹ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸದೇ ಕಾರ್ಯಾಚರಿಸುತ್ತಿರುವ ಬ್ರಹ್ಮರಕೊಟ್ಲು ಟೋಲ್ ಕೇಂದ್ರದಲ್ಲಿ ತಕ್ಷಣವೇ ಟೋಲ್ ಸಂಗ್ರಹ ಸ್ಥಗಿತಗೊಳಿಸಿ, ಟೋಲ್ ಗೇಟ್ ತೆರವುಗೊಳಿಸಬೇಕು ಎಂಬುದು ನಮ್ಮ ಸ್ಪಷ್ಟ ಅಭಿಪ್ರಾಯ ಎಂದು ಹೇಳಿದರು.

ಈ ವೇಳೆ ಟೋಲ್ ಗೇಟ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ, ಹೆದ್ದಾರಿ ಪ್ರಾಧಿಕಾರವು ಸಭೆ ನಡೆಸಬೇಕು. ಸಾರ್ವಜನಿಕರಿಗೆ ಯೋಜನೆಗೆ ಸಂಬಂಧಿಸಿದ ಹೂಡಿಕೆ ಮತ್ತು ಇದುವರೆಗೆ ಸಂಗ್ರಹಿಸಿದ ಮೊತ್ತದ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ಸುರತ್ಕಲ್ ಹೋರಾಟದ ಹಾದಿಯಲ್ಲಿ ವಿವಿಧ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗುತ್ತಿದ್ದು, ಗಂಭೀರ ಸ್ವರೂಪದ ಹೋರಾಟಕ್ಕೂ ನಾವು ಸಿದ್ಧತೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ಬಿ. ಶೇಖರ್, ಮೋಹನ್ ಶೆಟ್ಟಿ, ಪಿಯೂಸ್ ಎಲ್. ರೊಡ್ರಿಗಸ್ ಹಾಗೂ ಕೋಶಾಧಿಕಾರಿ ಬೇಬಿಕುಂದರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *