ಮಂಗಳೂರು: ಟಾಟಾ ಇಂಟ್ರಾ ವಾಹನದ ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದ ನಗದು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಯನ್ನು ಮಂಗಳೂರು, ಕಸಬ ಬೆಂಗ್ರೆ ನಿವಾಸಿ ಝಾಕೀರ್ ಹುಸೈನ್ ಯಾನೆ ಜಾಕಿ (38) ಎಂದು ಗುರುತಿಸಲಾಗಿದೆ.

ಫೆ. 7 ರಂದು ಶ್ರೀಧರ ಆಳ್ವ ಅವರಿಗೆ ಸೇರಿದ ಅಡಿಕೆಯನ್ನು ಟಾಟಾ ಇಂಟ್ರಾ ವಾಹನದಲ್ಲಿ ತುಂಬಿಸಿಕೊಂಡು ಬೀಭಿ ಅಲಾಬಿಯಲ್ಲಿರುವ ಅಂಬಾರ ಸುಪಾರಿ ಅಂಗಡಿಗೆ ಮಾರಾಟ ಮಾಡಿದ್ದಾರೆ. ಈ ವೇಳೆ ಅಂಗಡಿ ಮಾಲೀಕರು ನೀಡಿದ 1,28,740 ರೂ. ಹಣವನ್ನು ವಾಹನದ ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದಾರೆ.

ನಂತರ ವಾಹನವನ್ನು ಚಲಾಯಿಸಿಕೊಂಡು ಬಂದರ್ ನ ಜೆ.ಎಂ.ರೋಡ್ ನಲ್ಲಿರುವ ಸದರ್ನ್ ಏಜೆನ್ಸಿ ಗೆ ತೆರಳಿ ಎಸಿಪಿ ಶೀಟ್ ಖರೀದಿಸಿ ವಾಹನದಲ್ಲಿ ಕುಳಿತು ಡ್ಯಾಶ್ ಬೋರ್ಡ್ ತೆರೆದಾಗ ಅದರಲ್ಲಿಟ್ಟಿದ್ದ ರೂ. 1,28,740 ರೂ. ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನಗರದ ಮಣ್ಣಗುಡ್ಡ ಜಂಕ್ಷನ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯಿಂದ ಕಳವು ಮಾಡಿದ 70,000 ರೂ. ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಹಾಗೂ ಕಳ್ಳತನದ ಹಣದಿಂದ ಖರೀದಿಸಿದ ವಿವೋ ಕಂಪನಿಯ ಮೊಬೈಲ್ ಪೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.






