ಮಂಗಳೂರು: ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಂಗಳೂರಿನ ವೆಲೆನ್ಸಿಯಾ ಪ್ರದೇಶದಲ್ಲಿರುವ ರಿಟ್ರೀಟ್ ಹೌಸ್ ಸಮೀಪ ಡಿ. 25 ರಂದು ಮುಂಜಾನೆ ನಡೆದಿದೆ.

ಬೆಳಿಗ್ಗೆ ನಂದಿಗುಡ್ಡ ಕಡೆಯಿಂದ ಕಂಕನಾಡಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ರಸ್ತೆ ಮಧ್ಯೆ ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಸಾರ್ವಜನಿಕರು ಧಾವಿಸಿ ಕಾರನ್ನು ಸರಿಯಾದ ಸ್ಥಿತಿಗೆ ತಿರುಗಿಸಿ ನಿಲ್ಲಿಸಲು ಸಹಕರಿಸಿದರು. ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು, ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.






