Breaking
23 Dec 2024, Mon

ಡಿಬಿಟಿ ಚಮತ್ಕಾರ: 8 ವರ್ಷದಲ್ಲಿ ಸರ್ಕಾರಕ್ಕೆ 3 ಲಕ್ಷ ಕೋಟಿ ರೂ ಹಣ ಉಳಿತಾಯ: ನಿರ್ಮಲಾ ಸೀತಾರಾಮನ್

ನ್ಯೂಯಾರ್ಕ್: ಭಾರತದಲ್ಲಿ ವಿವಿಧ ಇಲಾಖೆಗಳ ಹಲವು ಯೋಜನೆಗಳಲ್ಲಿ ಸರ್ಕಾರವು ಫಲಾನುಭವಿಗಳ ಖಾತೆಗೆ ಡಿಬಿಟಿ ಸ್ಕೀಮ್ ಮೂಲಕ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಇದರಿಂದ ಫಲಾನುಭವಿಗಳಿಗೆ ಹಣ ನೇರವಾಗಿ ಸಿಗುತ್ತದೆ. ಸರ್ಕಾರಕ್ಕೆ ಹಣ ಸೋರಿಕೆ ತಪ್ಪುತ್ತದೆ. ಡಿಬಿಟಿ ಮಾರ್ಗಕ್ಕೆ ಬರುವ ಮುನ್ನ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಹೊರೆಯಾಗುತ್ತಿತ್ತು. ಈಗ ಅದು ಸಾಕಷ್ಟು ಕಡಿಮೆ ಆಗಿದೆ.

ಅಮೆರಿಕಕ್ಕೆ ಏಳು ದಿನ ಪ್ರವಾಸ ಕೈಗೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭಾರತದ ಡಿಬಿಟಿ ಸ್ಕೀಮ್ ಯಶಸ್ಸಿನ ಬಗ್ಗೆ ಅಲ್ಲಿನ ಜನರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ 51 ಇಲಾಖೆಗಳು ಮತ್ತು ಸಚಿವಾಲಯಗಳು ಡಿಬಿಟಿ ವಿಧಾನ ಅಳವಡಿಸಿಕೊಂಡಿವೆ. ಕಳೆದ 8 ವರ್ಷದಲ್ಲಿ ಡಿಬಿಟಿ ಮೂಲಕ 450 ಬಿಲಿಯನ್ ಡಾಲರ್​ಗೂ (37.8 ಲಕ್ಷ ಕೋಟಿ ರೂ) ಹೆಚ್ಚು ಮೊತ್ತದ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ, ಸರ್ಕಾಕ್ಕೆ 40 ಬಿಲಿಯನ್ ಡಾಲರ್ (3.36 ಲಕ್ಷ ಕೋಟಿ ರೂ) ಮೊತ್ತದ ಹಣ ಸೋರಿಕೆ ತಪ್ಪಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಅಂದರೆ ಶೇ. 10ರಷ್ಟು ಹಣವನ್ನು ಸರ್ಕಾರ ಉಳಿಸಲು ಸಾಧ್ಯವಾಗಿದೆ ಎಂದರು.

ಅಮೆರಿಕದ ಪೆನ್​ಸಿಲ್ವೇನಿಯಾ ಯೂನವರ್ಸಿಟಿಯ ವಾರ್ಟನ್ ಬಿಸಿನೆಸ್ ಸ್ಕೂಲ್​ನಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ‘ಹಣ ಸೋರಿಕೆ ತಡೆಯುವುದು ಬಹಳ ಮಹತ್ವದ್ದು. ಹಣಕಾಸು ಸಚಿವೆಯಾಗಿ, ತೆರಿಗೆ ಪಾವತಿದಾರರ ಪ್ರತಿಯೊಂದು ಪೈಸೆಯೂ ಸರಿಯಾಗಿ ವಿನಿಯೋಗವಾಗುತ್ತಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಿತ್ತು. ಹಣ ಸೋರಿಕೆ ಆಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ,’ ಎಂದು ಹೇಳಿದ್ದಾರೆ. ಭಾರತದಲ್ಲಿ ಡಿಜಿಟಲ್ ಟೆಕ್ನಾಲಜಿ ಅಳವಡಿಸಿಕೊಂಡಿದ್ದರಿಂದ ಹಣ ಸೋರಿಕೆ ಕಡಿಮೆ ಆಗಿದೆ. ವಂಚಕ ವಹಿವಾಟುಗಳು ಮತ್ತು ನಕಲಿ ಖಾತೆದಾರರನ್ನು ದೂರ ಮಾಡಲು ಸಾಧ್ಯವಾಗಿದೆ. ಫಲಾನುಭವಿಗಳಿಗೆ ಸರ್ಕಾರ ಮಾಡುವ ಹಣ ವರ್ಗಾವಣೆ ವಿಚಾರ ಮಾತ್ರವಲ್ಲ, ಕೇಂದ್ರ ಮತ್ತು ರಾಜ್ಯಗಳ ನಡುವಿನ ವಹಿವಾಟುಗಳನ್ನೂ ಡಿಜಿಟಲ್ ಮೂಲಕವೇ ಮಾಡಲಾಗುತ್ತಿದೆ. ಮ್ಯಾನುಯಲ್ ಆಗಿ ವಹಿವಾಟು ನಮೂದಿಸುವ ಅವಶ್ಯಕತೆಯೇ ಇಲ್ಲ. ಎಲ್ಲವೂ ಎಲೆಕ್ಟ್ರಾನಿಕ್ ಟ್ರಾನ್ಸಾಕ್ಷನ್​ಗಳು,’ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *