ಉಪ್ಪಿನಂಗಡಿ: ಬಾರ್ಯ ಗ್ರಾಮದ ಕಂಗಿನಾರುಬೆಟ್ಟು ಪ್ರದೇಶದಲ್ಲಿ ಗೋಮಾಂಸದ ತ್ಯಾಜ್ಯ ಪತ್ತೆಯಾಗಿದ್ದು ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪತ್ತೆಯಾದ ತ್ಯಾಜ್ಯ ಎರಡು ಅಥವಾ ಮೂರು ದಿನಗಳ ಹಿಂದೆ ಎಸೆಯಲ್ಪಟ್ಟಿರಬಹುದೆಂದು ಅಂದಾಜಿಸಲಾಗಿದ್ದು, ಗೋವನ್ನು ಹತ್ಯೆಗೈಯುವ ವೇಳೆ ಅದರ ಹೊಟ್ಟೆಯಲ್ಲಿ ಗರ್ಭಸ್ಥ ಕರುವಿದ್ದು ಅದನ್ನೂ ತ್ಯಾಜ್ಯದ ಜೊತೆ ಎಸೆದಿರುವುದು ಕಂಡು ಬಂದಿದೆ.

ಈ ಕುರಿತು ವಿಶ್ವ ಹಿಂದೂ ಪರಿಷತ್ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್ ಎಂ. ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲೆಯಲ್ಲಿ ಇತರ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿದ್ದರೂ, ಗೋಹಂತಕರನ್ನು ನಿಗ್ರಹಿಸಲು ಪೊಲೀಸರಿಗೆ ಆಗುತ್ತಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮೂರು ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪೊಲೀಸ್ ಠಾಣೆಯ ಮುಂದೆ ಧರಣಿ ಮತ್ತು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





