ಪುತ್ತೂರು: ಪಂಚ ಗ್ಯಾರಂಟಿ ಯೋಜನೆ ಮೂಲಕ ಜನರ ದಾರಿತಪ್ಪಿಸಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರಕಾರ ಈಗ ಇದೇ ಪಂಚ ಗ್ಯಾರಂಟಿ ಯೋಜನೆಯಿಂದಾಗಿ ಬೊಕ್ಕಸ ಖಾಲಿ ಮಾಡಿಕೊಂಡು ಕೂತಿದೆ. ಜನರ ಗಮನ ಬೇರೆ ಕಡೆಗೆ ಸೆಳೆಯಲು ಇಲ್ಲಸಲ್ಲದ ವಿಚಾರ ಎತ್ತಿಕೊಂಡು ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.

ದೇಶದಲ್ಲಿ ಮತದಾರರ ಪಟ್ಟಿ ಸ್ಪೆಷಲ್ ಇಂಟೆನ್ಸಿವ್ ರಿವಿಶನ್ ಅಭಿಯಾನ ನಡೆಯಲಿರುವ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೂತ್ ಏಜೆಂಟರಿಗಾಗಿ ಇಲ್ಲಿನ ಜೈನ ಭವನದಲ್ಲಿ ಮಂಗಳವಾರ ನಡೆದ ಬಿಎಲ್‌ಎ-2 ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಜನ ಮತ ಮಾರಲಿಲ್ಲ. ಆದರೆ ರಾಜ್ಯದ ಇತರ ಕಡೆ ಆಮಿಷಗಳನ್ನು ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾರರು ಮತ್ತೆ ಜಾಗೃತರಾಗುವ ಅನಿವಾರ್ಯತೆ ಇದೆ ಎಂದರು.

ಶಕ್ತಿಸ್ವರೂಪಿಣಿ ಭಾರತಿ:
ಆಪರೇಶನ್ ಸಿಂದೂರ ಮತ್ತು ಸರ್ಜಿಕಲ್ ದಾಳಿಯ ನಂತರ ತಾಯಿ ಭಾರತಿ ವಿಶ್ವಮುಖದಲ್ಲಿ ಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಆರೋಹಣ ಮಾಡಲು ಸಾಧ್ಯವಿಲ್ಲದ ಸ್ಥಿತಿ ಇತ್ತು. ಈಗ ಅಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. 70 ವರ್ಷಗಳ ಆಡಳಿತದ ಅವಧಿಯಲ್ಲಿ ನಮಗೆಲ್ಲ ಒಂದು ಆತಂಕವಿತ್ತು. ನಮ್ಮ ದೇಶ ಪರಮ ವೈಭವದತ್ತ ಹೋಗುವುದೇ ಎಂಬ ಭಯವಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ನರೇಂದ್ರ ಮೋದಿ ಅವರ ನಾಯಕತ್ವ ಸಿಕ್ಕಿದ ಮೇಲೆ ತಾಯಿ ಭಾರತಿ ಪರಮ ವೈಭವದತ್ತ ಸಾಗುತ್ತಿದ್ದಾಳೆ ಎಂದು ಬೊಟ್ಯಾಡಿ ನುಡಿದರು.

ಈಶಾನ್ಯ ಭಾರತದಲ್ಲಿ ಬಾಂಗ್ಲಾದೇಶದಿಂದ ಬಂದ ನುಸುಳುಕೋರರು ಮತದಾನದ ಹಕ್ಕು ಪಡೆದುಕೊಂಡಿದ್ದಾರೆ. ಕೆಲವು ಈಶಾನ್ಯ ರಾಜ್ಯಗಳಲ್ಲಿ ಶೇ.40 ಮತದಾರರು ನುಸುಳುಕೋರರೇ ಆಗಿದ್ದಾರೆ. ಇದನ್ನೆಲ್ಲ ತಡೆದು ನಿಜವಾಗಿಯೂ ಯಾರು ದೇಶದ ಪ್ರಜೆಗಳೋ ಅವರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಎಸ್ ಐಆರ್ (ಸ್ಪೆಷಲ್ ಇಂಟೆನ್ಸಿವ್ ರಿವಿಶನ್) ಮಾಡಲು ಚುನಾವಣಾ ಆಯೋಗ ಮುಂದಾಗಿದೆ. ಇದರ ಯಶಸ್ವಿನಲ್ಲಿ ನಮ್ಮ ಪಕ್ಷದ ಬಿಎಲ್ ಎಗಳು ಸಕ್ರಿಯವಾಗಿ ತೊಡಗಿಸಿಕೊಂಡು ಆಯೋಗದ ಕಾರ್ಯಕ್ಕೆ ನೆರವು ನೀಡಬೇಕು ಎಂದುವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಸಂಜೀವ ಮಠಂದೂರು, ಪ್ರೇಮಾನಂದ ಶೆಟ್ಟಿ ಮತ್ತು ಸುನಿಲ್ ಆಳ್ವ ಅವರು ಎಸ್‌ಐಆರ್ ಬಗ್ಗೆ ಬೂತ್ ಎಜೆಂಟರಿಗೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.
ವೇದಿಕೆಯಲ್ಲಿ ಸಂಸದ ಬ್ರಿಜೇಶ್ ಚೌಟ,ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪುತ್ತೂರು ಮಂಡಲದ ಪ್ರಭಾರಿ ಸುನಿಲ್ ಆಳ್ವ, ಪುತ್ತೂರು ನಗರ ಮಂಡಲ ಬಿಜೆಪಿ ಅಧ್ಯಕ್ಷ ಶಿವಕುಮಾರ್ ಪಿ.ಬಿ. ಕಲ್ಲಿಮಾರ್, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್,ಎ???ಟಿ ಮೋರ್ಛಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ಉಪಸ್ಥಿತರಿದ್ದರು.



