ಮಂಗಳೂರು: ನಗರದ ಹೊರವಲಯದ ಸುರತ್ಕಲ್ ಪರಿಸರದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸಿಸಿಟಿವಿಯಲ್ಲಿ ಕಳ್ಳರ ಚಲನವಲನ ಕಂಡು ಜನರು ಬೆಚ್ಚಿಬೀಳುತ್ತಿರುವ ಪ್ರಕರಣ ವರದಿಯಾಗಿದೆ.
ಇದರಿಂದ ರಾತ್ರಿ ಹೊತ್ತು ಮನೆಯ ಸದಸ್ಯರು ಮನೆಗೆ ಬೀಗ ಹಾಕಿ ಸಭೆ ಸಮಾರಂಭಗಳಿಗೆ ತೆರಳಲೂ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ.

ಈ ನಿಟ್ಟಿನಲ್ಲಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಮನೆಗಳಿಗೆ ಸಿಸಿ ಟಿವಿ ಕೆಮರಾ ಅಳವಡಿಸಿಕೊಳ್ಳಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಸಿಸಿಟಿವಿ ಕೆಮರಾಗಳಲ್ಲಿ ಕಳ್ಳರ ಚಲನವಲನಗಳು ಸೆರೆಯಾಗುತ್ತಿವೆಯೇ ಹೊರತು ಕಳ್ಳತನ ಪ್ರಕರಣಗಳು ಕಡಿಮೆಯಾಗಿಲ್ಲ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಳ್ಳರು ಕೈಯಲ್ಲಿ ಕತ್ತಿ, ಚೂರಿ, ರಾಡು ಮತ್ತಿತರ ಮಾರಕಾಯುಧಗಳನ್ನು ಹಿಡಿದುಕೊಂಡೆ ಕಳ್ಳತನಕ್ಕೆ ಇಳಿಯುತ್ತಿರುವುದು ಪತ್ತೆಯಾಗಿದೆ.



