ಶಿವಮೊಗ್ಗ: ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗೆ ಬಿಸ್ಕೆಟ್ ಪ್ಯಾಕೆಟ್‌ಗಳಲ್ಲಿ ಗಾಂಜಾ ಮತ್ತು ಸಿಗರೇಟ್ ಕೊಂಡೊಯ್ಯಲು ಯತ್ನಿಸಿದ ಇಬ್ಬರು ಯುವಕರನ್ನು ಜೈಲು ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಭದ್ರಾವತಿ ನಗರದ ರಾಹಿಲ್ (19) ಹಾಗೂ ತಸೀರುಲ್ಲಾ (19) ಎಂದು ಗುರುತಿಸಲಾಗಿದೆ.

ಕೈದಿ ಮೊಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನ ಸಂದರ್ಶನಕ್ಕೆಂದು ಈ ಇಬ್ಬರು ಯುವಕರು ಮೂರು ಬಿಸ್ಕೆಟ್ ಪ್ಯಾಕೆಟ್‌ಗಳನ್ನು ತಂದಿದ್ದರು. ಅನುಮಾನಗೊಂಡ ಜೈಲು ಸಿಬ್ಬಂದಿ ಬಿಸ್ಕೆಟ್ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ, ಕಪ್ಪು ಗಮ್ ಟೇಪ್‌ನಲ್ಲಿ ಸುತ್ತಿದ ವಸ್ತುಗಳು ಪತ್ತೆಯಾಗಿದ್ದು, ತಪಾಸಣೆ ಮಾಡಿದಾಗ ಅವುಗಳಲ್ಲಿ 1 ಗಾಂಜಾ ಪ್ಯಾಕೆಟ್ ಮತ್ತು 2 ಸಿಗರೇಟ್ ಪ್ಯಾಕೆಟ್‌ಗಳು ಇರುವುದು ದೃಢಪಟ್ಟಿದೆ.
ತಕ್ಷಣ ಆರೋಪಿಗಳನ್ನು ತುಂಗಾ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ ಜೈಲು ಸಿಬ್ಬಂದಿ ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕೇಂದ್ರ ಜೈಲು ಅಧೀಕ್ಷಕ ಡಾ.ರಂಗನಾಥ್ ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.




