ಮಂಗಳೂರು: ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನಾಭರಣ ಅಡವಿಟ್ಟು ₹6.24 ಲಕ್ಷ ವಂಚಿಸಿದ ಮೂವರು ಆರೋಪಿಗಳನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಆಕಾಶಭವನದ ಆನಂದನಗರ ನಿವಾಸಿ ಹಾರೀಫ್ ಅಬೂಬಕ್ಕರ್ (39), ನಂತೂರು ಬಿಕರ್ನಕಟ್ಟೆ ನಿವಾಸಿ ಮೊಹಮ್ಮದ್ ಆಶೀಕ್ ಕಟ್ಟತ್ತಾರ್ ಹುಸೈನ್ (34) ಹಾಗೂ ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ನಿವಾಸಿ ಅಬ್ದುಲ್ ರಮೀಝ್ (33) ಎಂದು ಗುರುತಿಸಲಾಗಿದೆ.

ವಿವಿದೋದ್ದೇಶ ಸಹಕಾರ ಸಂಘಕ್ಕೆ ಹಾರೀಫ್ ಅವರು ಅ. 9 ರಂದು ತೆರಳಿ ಅಸಲಿ ಚಿನ್ನಾಭರಣಗಳೆಂದು ನಂಬಿಸಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ₹6.24 ಲಕ್ಷ ಸಾಲ ಪಡೆದಿದ್ದನು. ಆದರೆ ಅಡವಿಟ್ಟ ಚಿನ್ನಾಭರಣಗಳ ಬಗ್ಗೆ ಅನುಮಾನ ಬಂದ ಹಿನ್ನೆಲೆ ಅವುಗಳನ್ನು ಪರಿಶೀಲಿಸಿದಾಗ ನಕಲಿ ಎಂದು ದೃಢಪಟ್ಟಿದೆ.

ಈ ಬಗ್ಗೆ ಸಹಕಾರಿ ಸಂಘವು ನೀಡಿದ ದೂರಿನ ಆಧಾರದ ಮೇಲೆ ಕಾವೂರು ಪೊಲೀಸರು ತನಿಖೆ ಕೈಗೊಂಡು ಮೂವರನ್ನೂ ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಒಟ್ಟು ಸುಮಾರು ₹26.5 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭಾರತೀಯ ನ್ಯಾಯ ಸಂಹಿತೆ, 2023ರ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.




