Breaking
23 Mar 2026, Mon

ಡಾ.ಶಿವರಾಮ ಕಾರಂತರ ಬಾಲವನವನ್ನು ನಿರಂತರ ಚಟುವಟಿಕೆಗಳ ಕೇಂದ್ರವನ್ನಾಗಿಸಬೇಕು – ಹಿರಿಯ ಸಾಹಿತಿ ಡಾ.ಬಿ.ಎ.ವಿವೇಕ್ ರೈ

ಪುತ್ತೂರು : ಡಾ.ಶಿವರಾಮ ಕಾರಂತರ ಬಾಲವನವನ್ನು ನಿರಂತರ ಚಟುವಟಿಕೆಗಳ ಕೇಂದ್ರವನ್ನಾಗಿಸಬೇಕು. ವರ್ಷಕ್ಕೆ ಒಂದೂ ಬಾರಿಯಾದರೂ 2 ದಿನಗಳ ಕಾರಂತ ಉತ್ಸವ ನಡೆಸಬೇಕು. ಕಾರಂತರ ಆಶಯಗಳಿಗೆ ಮರುಜೀವ ಕೊಡುವ ಕೆಲಸ ಮಾಡಬೇಕು ಎಂದು ಹಿರಿಯ ಸಾಹಿತಿ ಡಾ.ಬಿ.ಎ.ವಿವೇಕ್ ರೈ ಅವರು ಹೇಳಿದರು.

ಪುತ್ತೂರಿನ ಪರ್ಲಡ್ಕದ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು, ಡಾ.ಶಿವರಾಮ ಕಾರಂತ ಬಾಲವನ ಮತ್ತು ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ಡಾ.ಶಿವರಾಮ ಕಾರಂತರ 124 ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಬಾಲವನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಆ ಕಾಲದಲ್ಲಿ ಕಾರಂತರರು ಮಾಡಿರುವ ಸಾಮಾಜಿಕ ಕ್ರಾಂತಿ ಬಹುದೊಡ್ಡದು. ಅನುಭವ, ಅಧ್ಯಯನ, ಪ್ರವಾಸ, ಚಿಂತನೆ ಎಲ್ಲವನ್ನೂ ಒಳಗೊಂಡ ಸಾಹಿತ್ಯ ಅವರದ್ದಾಗಿದೆ. ಕಾರಂತರು ನನ್ನ ಬದುಕಿನ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಅವರು ಹೇಳಿದರು.

ಕಾರಂತ ಸ್ಮರಣೆ ಮಾಡಿದ ಡಾ.ಶಿವರಾಮ ಕಾರಂತರ ಸೋದರಳಿಯರಾದ ಹಿರಿಯ ಸಾಹಿತಿ ಶಾಂತಾರಾಮ ರಾವ್ ಅವರು, ಕಾರಂತರು ಮುಟ್ಟದ ಯಾವುದೇ ಕ್ಷೇತ್ರವಿಲ್ಲ, ಅವರು ಸಮಯಪ್ರಜ್ಞೆಯ ಪಾಲನೆ ಮಾಡುತ್ತಿದ್ದರು. ಬಡವ-ಬಲ್ಲಿದರೆಂಬ ಬೇಧವಿಲ್ಲದ, ಯಾವುದಕ್ಕೂ ಬಗ್ಗದ ವ್ಯಕ್ತಿತ್ವ ಅವರದ್ದಾಗಿತ್ತು, ಮುಂದೆ ಕಾರಂತರಂತಹ ಜನ ಸಾಹಿತ್ಯ ಕ್ಷೇತ್ರಕ್ಕೆ ಬರುವುದು ಕಷ್ಟ. ಕಾರಂತರಿಗೆ ಕಾರಂತರೇ ಸಾಕ್ಷಿಯಾಗಿದ್ದು, ಅವರ ಚಳುವಳಿಯನ್ನು ಶುಷ್ಕವಾಗಿಸಲು ಬಿಡದೆ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಜೀವ ತುಂಬುವ ಕೆಲಸ ಆಗಬೇಕಿದೆ ಎಂದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿದರು.

ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿಯು ಕಾರಂತರ ಪುತ್ಥಳಿಯ ಫಲಕ, ಸ್ಮರಣಿಕೆ, ರೂ. 25 ಸಾವಿರ ನಗದು ಹಣವನ್ನು ಒಳಗೊಂಡಿದ್ದು, 2024ರ ಬಾಲವನ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಿರಿಯ ಸಾಹಿತಿ, ನಿವೃತ್ತ ಉಪಕುಲಪತಿ ಡಾ.ಬಿ.ಎ.ವಿವೇಕ್ ರೈ ಹಾಗೂ 2025ರ ಬಾಲವನ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಿರಿಯ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಸಾಹಿತಿ ಡಾ.ಎನ್.ಸುಕುಮಾರ ಗೌಡ ಅವರಿಗೆ ಪ್ರದಾನ ಮಾಡಲಾಯಿತು.

ಈ ಸಂದರ್ಭ ಪುತ್ತೂರಿನ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶ ರಾಜೇಶ್ ಜಿ,ಕಸಾಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಮುಂಬಯಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್, ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕ್ಸೇವಿಯರ್ ಡಿ.ಸೋಜಾ,ಶಿವರಾಮ ಕಾರಂತರ ಪುತ್ರಿ ಕ್ಷಮಾ ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *