5 ಕೋಟಿ ರೂ. ಇನ್ಶೂರೆನ್ಸ್ ಹಣಕ್ಕಾಗಿ ಪ್ರಿ ಪ್ಲಾನ್‌ ಮರ್ಡರ್:‌ 6 ಮಂದಿ ಪೊಲೀಸ್‌ ವಶಕ್ಕೆ

ವಿಜಯನಗರ: ಇನ್ಶೂರೆನ್ಸ್ ಹಣಕ್ಕಾಗಿ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಪ್ರಿ ಪ್ಲಾನ್‌ ಮೂಲಕ ಕೊಲೆ ಮಾಡಿ ಬಳಿಕ ಅಪಘಾತವೆಂದು ಬಿಂಬಿಸಿದ ಘಟನೆ ಹೊಸಪೇಟೆ ಹೊರವಲಯದಲ್ಲಿ ನಡೆದಿದ್ದು, 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಕೃಷ್ಣಪ್ಪ, ರವಿ ಗೋಸಂಗಿ, ವಿಜಯನಗರ ಜಿಲ್ಲೆಯ ಅಜೇಯ, ರಿಯಾಝ್, ಯೋಗರಾಜ್ ಸಿಂಗ್, ಹುಲಿಗೆಮ್ಮ ಎಂದು ಗುರುತಿಸಲಾಗಿದೆ.

ಹೊಸಪೇಟೆಯ ಕೌಲ್ ಪೇಟೆಯ ನಿವಾಸಿ ಗಂಗಾಧರ ಕೊಲೆಯಾದ ವ್ಯಕ್ತಿ.

ಘಟನೆಯ ವಿವರ:- ಗಂಗಾಧರ ಅವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಇದ್ದು, ಆರ್ಥಿಕ ಸಂಕಷ್ಟವೂ ಕಾಡುತಿತ್ತು. ಹೀಗಾಗಿ ಅವರ ಪರಿಸ್ಥಿತಿಯ ಲಾಭ ಪಡೆಯಲು ಸಂಚು ರೂಪಿಸಿದ ಆರು ಮಂದಿ ಗಂಗಾಧರ ಅವರ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು, ನಕಲಿ ನಾಮಿನಿ ಸೃಷ್ಟಿಸಿದ್ದರು. ಅಲ್ಲದೆ ಅವರಿಗೆ ಮದುವೆಯಾಗಿದ್ದರೂ ಬೇರೊಬ್ಬ ಮಹಿಳೆಯನ್ನು ಪತ್ನಿ ಎಂದು ನಮೂದಿಸಿ ಉಪನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು. ಬಳಿಕ ವಿವಿಧ ವಿಮಾ ಕಂಪನಿಗಳಲ್ಲಿ 5.25 ಕೋಟಿ ಮೊತ್ತದ ಅಪಘಾತ ವಿಮೆ, ಇತರೆ ವಿಮೆಯ ಆರು ಪಾಲಿಸಿಗಳನ್ನು ಮಾಡಿಸಿ ಆರೋಪಿಗಳೇ ಪ್ರೀಮಿಯಂ ಹಣ ತುಂಬಿದ್ದರು. ಆದರೆ ಈ ಮಧ್ಯೆ ಗಂಗಾಧರ ಮೃತಪಡದ ಕಾರಣ ಕೆಲ ಪಾಲಿಸಿಗಳು ತಿರಸ್ಕೃತಗೊಂಡವು. ಹೀಗಾಗಿ ಈ 6 ಮಂದಿ ಗಂಗಾಧರನನ್ನು ಕೊಲ್ಲುವ ಯೋಜನೆ ರೂಪಿಸಿದರು.

ಹೊಸಪೇಟೆ ಹೊರವಲಯದ ಜಂಬುನಾಥ ಹಳ್ಳಿಗೆ ಹೋಗುವ ರಸ್ತೆಗೆ ಗಂಗಾಧರ ಅವರನ್ನು ಕರೆತಂದು ಸೆಕೆಂಡ್ ಹ್ಯಾಂಡ್ ಎಕ್ಸೆಲ್ ಬೈಕ್‌ ಮೇಲೆ ಕೂರಿಸಿ ಕಾರಿನಿಂದ ಗುದ್ದಿಸಿ ಅಪಘಾತವೆಂದು ಬಿಂಬಿಸುವಂತೆ ಮಾಡಿ ಪರಾರಿಯಾಗಿದ್ದರು.

ಪತಿಯ ಸಾವಿನ ಬಗ್ಗೆ ಅನುಮಾನಗೊಂಡು ಗಂಗಾಧರನ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆಯ ವೇಳೆ ಕೃತ್ಯ ಬಯಲಾಗಿದೆ.

Leave a Reply

Your email address will not be published. Required fields are marked *