ಬಂಟ್ವಾಳ: ಜಾನುವಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯೊಂದು ಇದೀಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿಯಾದ ಹಸನಬ್ಬ ಎಂಬಾತನು ಗೋ ಕಳವು, ಗೋವಧೆ ಮತ್ತು ಅಕ್ರಮ ಕಸಾಯಿಖಾನೆ ನಡೆಸುವ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಈತನು ಯಾವುದೇ ಪರವಾನಿಗೆ ಇಲ್ಲದೆ ಮನೆಯಲ್ಲಿಯೇ ಅಕ್ರಮ ಕಸಾಯಿಖಾನೆ ನಿರ್ಮಿಸಿಕೊಂಡು ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದು ಇದನ್ನು ನಿಯಂತ್ರಿಸಲು ಅಕ್ರಮವಾಗಿ ನಿರ್ಮಿಸಿರುವ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು, ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ, ಮಂಗಳೂರು ಉಪವಿಭಾಗರವರಿಗೆ ವರದಿ ಸಲ್ಲಿಸಿದ್ದರು.

ಪೊಲೀಸರ ವರದಿಯನ್ನು ಪರಿಗಣಿಸಿದ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ, ಮಂಗಳೂರು ಉಪವಿಭಾಗದರವರು, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮದ ಅಡಿಯಲ್ಲಿ ಮನೆ ಮತ್ತು ಅಕ್ರಮ ಕಸಾಯಿಖಾನೆ ಸೀಜ್ ಮಾಡುವಂತೆ ಸೆ. 25 ರಂದು ಆದೇಶ ಹೊರಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಸನಬ್ಬನ ವಶದಲ್ಲಿರುವ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಪಾಡಿ ಎಂಬಲ್ಲಿರುವ ಮನೆಯನ್ನು ಅಕ್ರಮ ಕಸಾಯಿಖಾನೆಯನ್ನು ಜಪ್ತಿ ಮಾಡಿ, ಸರ್ಕಾರಿ ವಶಕ್ಕೆ ಪಡೆಯಲಾಗಿದೆ.




