ಮೀನುಗಾರಿಕೆಗೆ ತೆರಳಿದ್ದ ಬೋಟ್‌ ನಲ್ಲಿ ತಾಂತ್ರಿಕ ದೋಷ : ಪ್ರಾಣಾಪಾಯದಿಂದ ಪಾರಾದ ಮೀನುಗಾರರು

ಕುಂದಾಪುರ: ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಇಂಜಿನ್ ಸ್ಥಗಿತವಾಗಿ ಬೋಟ್ ದಡಕ್ಕೆ ಅಪ್ಪಳಿಸಿ ಜಖಂಗೊಂಡ ಘಟನೆ ಹಂಗಾರಕಟ್ಟೆ ಬಳಿ ನಡೆದಿದೆ.

ಕೋಡಿಬೆಂಗ್ರೆ ನಿವಾಸಿ ಮಹೇಶ್ ಎಂಬವರಿಗೆ ಸೇರಿದ ‘ಮಹಾಕಾಳಿ’ ಎಂಬ ಹೆಸರಿನ ಬೋಟ್ ಸೆ.17ರಂದು ಬೆಳಗ್ಗೆ ಕೋಡಿ ಬೆಂಗ್ರೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.

ಈ ವೇಳೆ ಹಂಗಾರಕಟ್ಟೆ ಬಂದರು ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಎಷ್ಟೇ ಪ್ರಯತ್ನಿಸಿದರೂ ಇಂಜಿನ್ ಪುನಃ ಆರಂಭಗೊಂಡಿಲ್ಲ. ಈ ನಡುವೆ, ಬಿರುಗಾಳಿ ಮತ್ತು ಅಲೆಗಳ ರಭಸಕ್ಕೆ ಬೋಟ್ ಸಮುದ್ರ ತೀರಕ್ಕೆ ಬಂದು ಕೋಡಿ ಕನ್ಯಾನ ಗ್ರಾಮದ ಕೋಡಿ ಬಳಿ ದಡಕ್ಕೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.

ಬೋಟ್‌ನಲ್ಲಿದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಬೋಟ್ ಮತ್ತು ಅದರಲ್ಲಿದ್ದ ಇತರೆ ಸಾಮಾಗ್ರಿಗಳು ಹಾನಿಗೊಳಗಾಗಿ, ಸುಮಾರು 10 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *