ವಿಟ್ಲ: ಅಳಿಕೆ ಗ್ರಾಮದ ಎರುಂಬು ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ವಿಟ್ಲ ಕಸಬಾ ಗ್ರಾಮದ ಮಂಗಳಪದವು ನಿವಾಸಿಯಾಗಿರುವಂತಹ ಸನತ್ ಕುಮಾರ್(23), ಮಹಮ್ಮದ್ ರಾಝಿಕ್(23), ನಿವಾಸಿ ಚೇತನ್(23) ಎಂದು ಗುರುತಿಸಲಾಗಿದೆ.

ಸೆ.15 ರಂದು ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ರವರು ಸಿಬ್ಬಂದಿಗಳೊಂದಿಗೆ ಕರ್ತವ್ಯದಲ್ಲಿದ್ದ ವೇಳೆ ಬಂದ ಖಚಿತ ಮಾಹಿತಿಯಂತೆ, ಅನುಮಾಸ್ಪದವಾಗಿ ನಿಂತಿದ್ದ ದ್ವಿಚಕ್ರ ವಾಹನವನ್ನು ತಡೆದು ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದದ್ದು ತಿಳಿದುಬಂದಿದೆ.

ಆರೋಪಿಗಳಿಂದ 6.27 ಗ್ರಾಂ ತೂಕದ ಗಾಂಜಾ, ಮೂರು ಮೊಬೈಲ್ ಫೋನ್‌ಗಳು, ಹಾಗೂ ಒಂದು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಇನ್ನೋರ್ವ ಆರೋಪಿಯಾದ ಧ್ಯಾನ್ ಕರ್ಕೆರ ಎಂಬಾತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.



