Breaking
24 Mar 2026, Tue

ರಾಯಚೂರಿನಲ್ಲಿ ವಿಷ ಕುಡಿದ ಒಂದೇ ಕುಟುಂಬದ ಮೂವರು ಯುವತಿಯರು, ಒಬ್ಬಳು ಸಾವು

ರಾಯಚೂರು: ಪ್ರೀತಿಸಿದವ್ರ ಜೊತೆ ಮನೆಯವ್ರು ಮದುವೆ ಮಾಡಲ್ಲ ಎಂದು ಒಂದೇ ಕುಟುಂಬದ ಮೂವರು ಯುವತಿಯರು ವಿಷ ಕುಡಿದಿದ್ದು , ಓರ್ವ ಯುವತಿ ಸಾವನ್ನಪ್ಪಿದ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಕೆ.ಇರಬಗೇರಾ ಗ್ರಾಮದಲ್ಲಿ ನಡೆದಿದೆ.

ಯುವತಿ ರೇಣುಕಾ (17) ಮೃತ ದುರ್ದೈವಿಯಾಗಿದ್ದಾಳೆ.

ಕ್ರಿಮಿನಾಶಕ ಸೇವಿಸಿ ಬಳಿಕ ಬಾವಿಗೆ ಹಾರಿದ್ದ ಇಬ್ಬರು ಯುವತಿಯರಲ್ಲಿ ರೇಣುಕಾ ಸಾವನ್ನಪ್ಪಿದ್ದಾಳೆ.

ಇನ್ನೋರ್ವ ಯುವತಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾಳೆ. ಕ್ರಿಮಿನಾಶಕ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಮತ್ತೋರ್ವ ಯುವತಿಯ ಪರಿಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಮೂವರು ಯುವತಿಯರು ಸಂಬಂಧಿಕರಾದ್ರೂ ಸ್ನೇಹಿತೆಯರಂತೆ ಬಹಳ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ.

ಘಟನೆಯ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮೃತ ರೇಣುಕಾ ಮನೆಯವರು ಇನ್ನಿಬ್ಬರು ಯುವತಿಯರು ಸೇರಿ ತಮ್ಮ ಮಗಳಿಗೆ ವಿಷ ಕುಡಿಸಿ ಬಾವಿಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೂವರು ಯುವತಿಯರ ಪ್ರೇಮ ಪ್ರಕರಣವೇ ಈ ಘಟನೆಗೆ ಕಾರಣ ಅನ್ನೋದು ಬಯಲಾಗಿದೆ.

ತಾವು ಪ್ರೀತಿಸಿದವರೊಂದಿಗೆ ಮದುವೆಗೆ ಸಮ್ಮತಿ ಸೂಚಿಸಲ್ಲ ಎಂದು ಯುವತಿಯರು ಒಟ್ಟಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದರು ಎಂಬುದು ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *