ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ 10.25 ಅಡಿ ಎತ್ತರದ ಯಕ್ಷಗಾನದ ಗ್ರಾನೈಟ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಬಿಹಾರದ ಶಿಲ್ಪಿ ಹಿಮಾಂಶು ಕುಮಾರ್ ಅವರು ತುಳು ಸಂಸ್ಕೃತಿಗೆ ಮಾರು ಹೋಗಿ ಈ ಸುಂದರ ಕಲಾಕೃತಿಯನ್ನು ನಿರ್ಮಿಸಿದ್ದಾರೆ.

ಕೇವಲ 64 ದಿನಗಳಲ್ಲಿ ಹಿಮಾಂಶು ಮತ್ತು ಅವರ ತಂಡವು ಈ ಪ್ರತಿಮೆಯ ಕೆಲಸವನ್ನು ಪೂರ್ಣಗೊಳಿಸಿದ್ದು ಇದು ನಾಲ್ಕು ಟನ್ ಭಾರವಿದೆ. ಈ ಪ್ರತಿಮೆಯನ್ನು 3 ಅಡಿ ಪೀಠದ ಮೇಲೆ ನಿಲ್ಲಿಸಲಾಗಿದೆ.

ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನೈಜ ಸಂಭ್ರಮಾಚರಣೆಯ ಅಂಗವಾಗಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಈಗಾಗಲೇ ವಿಮಾನ ನಿಲ್ದಾಣದ ಆಗಮನ ಸಭಾಂಗಣದಲ್ಲಿ ದೋಣಿ ನಡೆಸುವ ಮೀನುಗಾರನ ಪ್ರತಿಮೆ, ಪ್ರಸಿದ್ಧ ಪಿಲಿ ವೇಷ, ಹಾಗೂ ಕೆಳ ಮಹಡಿಯ ಆಗಮನ ಸಭಾಂಗಣದಲ್ಲಿ ಜಾನಪದ ಕ್ರೀಡೆ ‘ಕಂಬಳ’ದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅದರೊಂದಿಗೆ ಈ ನೂತನ ಪ್ರತಿಮೆ ಕಣ್ಸೆಳೆಯುತ್ತಿದೆ.



