ಬಂಟ್ವಾಳ: ಸಿದ್ಧಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. 2024-25ನೇ ಸಾಲಿನಲ್ಲಿ ರೂ. 545.04 ಕೋಟಿ ವ್ಯವಹಾರ ನಡೆಸಿ, ರೂ.1.93 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ತಿಳಿಸಿದರು.

ಅವರು ಇಂದು ಸಿದ್ದಕಟ್ಟೆ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯ ವಿವರ ಮಂಡಿಸಿ, ಸಂಘವು 1947 ರಲ್ಲಿ ಆಗಿನ ಸಹಕಾರಿ ಬಂಧುಗಳ ನೆರವಿನಿಂದ ಶ್ರೀ . ಬಿ. ಕೃಷ್ಣ ರೈ ರವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿದ್ದು , ಸಂಘವು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಸೇರಿದಂತೆ ಬಂಟ್ವಾಳ ತಾಲೂಕಿನ 7 ಗ್ರಾಮಗಳೊಂದಿಗೆ ಒಟ್ಟಾರೆ 8 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದ್ದು , ಆಡಳಿತ ಮಂಡಳಿಯ ನಿರ್ದೇಶಕರ , ಸಿಬ್ಬಂದಿಗಳ ಹಾಗೂ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಎಲ್ಲರಿಗೂ ತೃಪ್ತಿಕರವಾದ ಸೇವೆಯನ್ನು ನೀಡುತ್ತಾ ಬಂದಿದೆ.

ಕಳೆದ 78 ವರ್ಷಗಳಿಂದ ಕಾರ್ಯಚರಿಸುತ್ತಿದ್ದು, ಅಭಿವೃದ್ದಿಯಲ್ಲಿ ಮುನ್ನಡೆಯುತ್ತಿದೆ. 2024-25ನೇ ವರ್ಷದಲ್ಲಿ ವಿವಿಧ ಉದ್ದೇಶಗಳಿಗೆ ಒಟ್ಟು ರೂ. 122.33 ಕೋಟಿ ಸಾಲ ವಿತರಿಸಲಾಗಿದ್ದು, ಹೊರ ಬಾಕಿ ಸಾಲವು ರೂ.112.32 ಕೋಟಿ ಆಗಿದ್ದು , ವಿತರಿಸಿದ ಸಾಲದಲ್ಲಿ ಶೇ 97% ರಷ್ಟು ವಸೂಲಾತಿಯಾಗಿರುತ್ತದೆ. 2024-25 ನೇ ಸಾಲಿನ ವರ್ಷಾಂತ್ಯಕ್ಕೆ ರೂ. 62.19 ಕೋಟಿ ಠೇವಣಿ ಹೊಂದಿದ್ದು , ನಮ್ಮ ಸಂಘವು ಕಳೆದ ಹಲವಾರು ವರ್ಷಗಳಿಂದ ಅಡಿಟ್ ವರದಿಯಲ್ಲಿ “ಎ” ಗ್ರೇಡ್ ನ್ನು ನಿರಂತರವಾಗಿ ಕಾಯ್ದುಕೊಂಡು ಬರಲಾಗಿದೆ ಎಂದರು.

ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಗರಿಷ್ಠ ಸಾಧನೆ ಮಾಡಿರುವ ಸಂಘವು 1771 ರೈತರು 2037 ಎಕ್ರೆ ಜಮೀನಿಗೆ ಸಂಬಂಧಿಸಿದಂತೆ ರೂ. 52.74 ಲಕ್ಷ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ರೈತರಿಂದ ಪ್ರೀಮಿಯಂ ಪಾವತಿಸಲಾಗಿದೆ. ಕಳೆದ ವರ್ಷ ಸುಮಾರು 5-6 ಕೋಟಿ ಬೆಳೆವಿಮೆ ಪರಿಹಾರ ಪಡೆದಿದ್ದು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳಲ್ಲಿ ನಮ್ಮ ಸಂಘವು ಒಂದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

“ರೈತ ಕಲ್ಯಾಣ ನಿಧಿ” ಯೋಜನೆಯ ಮೂಲಕ ಬೆಳೆ ಸಾಲ ಪಡೆದು ಮರಣ ಹೊಂದಿರುವ 24 ರೈತ ಕುಟುಂಬಕ್ಕೆ ರೂ.10,000 ಆರ್ಥಿಕ ನೆರವು ನೀಡಲಾಗಿದೆ ಎಂದರು.
ಸಂಘದ ಸದಸ್ಯರ ಪ್ರತಿಭಾನ್ವಿತ ಹತ್ತನೆ ಹಾಗೂ ಹಾಗೂ ದ್ವಿತೀಯ ಪಿ.ಯು.ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದ್ದು, ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಹಾಗೂ ಸರಕಾರಿ ಸೇವೆಯಿಂದ ನಿವೃತ್ತಿ ಹೊಂದಿದವರನ್ನು ಗೌರವಿಸಲಾಗಿದೆ. ಸ್ಥಳೀಯ ರೋಟರಿ ಕ್ಲಬ್ ಗಳ ಸಹಯೋಗದಲ್ಲಿ ಸಂಘದ ವತಿಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಮತ್ತು ಪ್ಯಾಶನ್ ಡಿಸೈನಿಂಗ್ ತರಬೇತಿ ನೀಡಲಾಗಿದೆ ಎಂದು ಸಂಘದ ಸಾಧನೆಯ ವಿವರವನ್ನು ನೀಡಿದರು.

ಸೆ.20 ಶನಿವಾರ ಬೆಳಿಗ್ಗೆ 10.30 ಕ್ಕೆ ಕೇಂದ್ರ ಕಛೇರಿಯ ಬೆಳ್ಳಿಪ್ಪಾಡಿ ಕೃಷ್ಣ.ರೈ ರೈತ ಸಭಾಂಗಣದಲ್ಲಿ ಸಂಘದ ವಾರ್ಷಿಕ ಮಹಾಸಭೆಯು ಜರಗಲಿದ್ದು ಸಂಘದ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಸಂದೇಶ್ ಶೆಟ್ಟಿ ಪೊಡುಂಬ, ನಿರ್ದೇಶಕರಾದ ದಿನೇಶ್ ಪೂಜಾರಿ , ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ , ಜಾರಪ್ಪ ನಾಯ್ಕ, ವೀರಪ್ಪ ಪರವ,ಎ. ಶಿವ ಗೌಡ , ಶ್ರೀಮತಿ, ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೆ , ನವೀನ್ ಹೆಗ್ಡೆ, ಮುಖ್ಯಕಾರ್ಯನಿರ್ವಾಹಣಾಧಿಕಾರಿಆರತಿ ಶೆಟ್ಟಿ, ಸಹಾಯಕ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಮಲ್ಲಿಕಾ ಉಪಸ್ಥಿತರಿದ್ದರು.


