ಮುಂಬಯಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 25ನೇ ಸಂಸ್ಥಾಪನಾ ದಿನಾಚರಣೆ, ಸಂಘ ಸಂಸ್ಥೆಗಳಿಗೆ ಗೌರವ ಪುರಸ್ಕಾರ, ಸಮಾರಂಭವು ಸಾಕೀನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್ ನಲ್ಲಿ ಸೆ. 5 ರಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರದ ಮಾನ್ಯ ಸ್ವೀಕರ್ ಯು. ಟಿ. ಖಾದರ್ ಅವರು ಕಳೆದ 25ವರ್ಷಗಳಿಂದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಸಾಮಾಜಿಕವಾಗಿಯೂ, ಅಭಿವೃದ್ದಿಯ ದೃಷ್ಟಿಯಿಂದ ಜಿಲ್ಲೆಗಳಲ್ಲಿ ಪರಿಸರವನ್ನು ಉಳಿಸುವ ಮುಖಾಂತರ ಸಮಿತಿಯು ಕರಾವಳಿಯ ಅಭಿವೃದ್ದಿಗೆ ಪೂರಕವಾಗಿದೆ ಎಂದರು.

ಶ್ರೀ ದಿಗಂಬರ ಜೈನ ಮಠ, ಮೂಡಬಿದಿರೆ, ದ.ಕ. ಇದರ ಜಗದ್ಗುರು ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವಾರ್ಯ ಮಹಾಸ್ವಾಮಿಜಿಯವರು ಆಶೀರ್ವಚನ ನೀಡುತ್ತಾ ನಮ್ಮ ತುಳುನಾಡು ಮಿನಿ ಭಾರತದಂತೆ, ನೀವು ಕೇವಲ ಒಬ್ಬರೇ ಅಲ್ಲ, ಇಂದು 25 ಸಮುದಾಯಗಳನ್ನು ಗುರುತಿಸಿ ಸನ್ಮಾನಿಸಿದ್ದು ನಿಜಕ್ಕೂ ಪ್ರಶಂಸನೀಯ.
ರಾಜಕೀಯ ಮಾಡಲು ಬಾರದೆ ಇದ್ದರು ರಾಜಕೀಯದವರನ್ನು ಒಳ್ಳೆಯದು ಮಾಡಲು ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರಿಂದ ಮಾತ್ರ ಸಾಧ್ಯ. ನಮ್ಮ ಜಿಲ್ಲೆಗಳಿಗೆ ಮುಂಬಯಿಗರ ಕೊಡುಗೆ ಅಪಾರ. ಸಮಿತಿಯ ಇವತ್ತಿನ ಬೆಳ್ಳಿ ಹಬ್ಬದ ಕಾರ್ಯಕ್ರಮ ಎಲ್ಲರಿಗೂ ಆನಂದ, ಶ್ರದ್ಧೆ ಮತ್ತು ಸಮರ್ಪಣೆಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಮಾತನಾಡಿ ಕಳೆದ 25 ವರ್ಷಗಳಿಂದ ನಮ್ಮ ಜಿಲ್ಲೆಗಳ ಹಲವಾರು ಗಣ್ಯ ವ್ಯಕ್ತಿಗಳ, ರಾಜಕಾರಿಣಿಗಳ ಸಹಾಯ ಹಾಗೂ ಪ್ರೋತ್ಸಾಹದಿಂದ ನಮ್ಮ ಸಮಿತಿಯು ಜಿಲ್ಲೆಗಳ ಅಭಿವೃದ್ದಿಗಾಗಿ ಹಮ್ಮಿಕೊಂಡ ಎಲ್ಲಾ ಕಾರ್ಯವನ್ನು ಸರಕಾರದ ಮೂಲಕ ಯಶಸ್ವಿಯಾಗಿ ಪೂರೈಸಿದ್ದೇವೆ. ಈ ಬಗ್ಗೆ ಜಾರ್ಜ್ ಫೆರ್ನಾಂಡೀಸ್ ರವರ ಕೊಡುಗೆ ಅಪಾರ. ಇಂದು ನಮ್ಮೊಂದಿಗೆ ಅನುಭವೀ ಅಧ್ಯಕ್ಷರಿದ್ದು ನಮ್ಮ ಮುಂದಿನ ಎಲ್ಲಾ ಯೋಜನೆಗಳು ಉನ್ನತ ಮಟ್ಟದಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ಸಂದೇಹವಿಲ್ಲ. ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ ಬಗ್ಗೆ ನಾವು ಈಗಾಗಲೇ ಪತ್ರಿಕಾಗೋಷ್ಠಿಯನ್ನು ಮಾಡಿದ್ದೇವೆ. ನಮಗೆ ಜಿಲ್ಲೆಗಳ ಅಭಿವೃದ್ದಿ ಅಗತ್ಯ ಎಂದರು.

ಮುಂಬಯಿಯ 25 ಜಾತೀಯ ಸಂಘಟನೆಗಳನ್ನು, ಅದರ ಅಧ್ಯಕ್ಷರುಗಳನ್ನು / ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸಮಿತಿಯ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.
ನಿತ್ಯಾನಂದ ಡಿ. ಕೋಟ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಯ ಉಪಾಧ್ಯಕ್ಷ ಪಿ. ಧನಂಜಯ ಶೆಟ್ಟಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಇನ್ನೂ ಅನೇಕರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಸಿಎ. ಐ. ಆರ್. ಶೆಟ್ಟಿ ಸ್ವಾಗತಿಸಿ, ಗೌರವ ಕಾರ್ಯದರ್ಶಿ ದೇವದಾಸ್ ಕುಲಾಲ್ ವಂದಿಸಿದರು. ಸಮಿತಿಯ ವಕ್ತಾರ ದಯಾಸಾಗರ ಚೌಟ ಕಾರ್ಯಕ್ರಮ ನಿರೂಪಿಸಿದರು.




