ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಡಿಪ್ಪಾಡಿ ಬ್ರಾಂಚ್ ಸಮಿತಿ ಇದರ ನೂತನ ಕಛೇರಿ ಕೊಡಿಪ್ಪಾಡಿ ಆನಾಜೆಯಲ್ಲಿ ಉದ್ಘಾಟಿಸಲಾಯಿತು.

ಕೊಡಿಪ್ಪಾಡಿ ಬ್ರಾಂಚ್ ಸಮಿತಿ ಆಧ್ಯಕ್ಷರಾದ ಫಾರೂಕ್ ಅರ್ಕ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ರವರು ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ ಎಸ್.ಡಿ.ಪಿ.ಐ ಎಂಬ ಪಕ್ಷ ಕೇವಲ ಚುನಾವಣೆ ಬಂದಾಗ ಮಾತ್ರ ಕಾರ್ಯಕ್ರಮಗಳನ್ನು ನಡೆಸುವ ಪಕ್ಷ ಅಲ್ಲ ಬದಲಾಗಿ ಜನರ ಜೀವನದ ಆಗು ಹೋಗುಗಳಿಗೆ ನಿರಂತರವಾಗಿ ಸ್ಪಂದಿಸುವ ಪಕ್ಷವಾಗಿದೆ, ಎಸ್.ಡಿ.ಪಿ.ಐ ಗೆ ಇಲ್ಲಿನ ಸರಕಾರಗಳು ಮತ್ತು ಇತರ ಪಕ್ಷಗಳು ಅದೆಷ್ಟು ಭಯಪಡುತ್ತಿದ್ದಾರೆ ಎಂದರೆ ನಮ್ಮ ಉಚಿತ ಸೇವಾಕೇಂದ್ರಗಳನ್ನು ಮುಚ್ಚಿಸುವುದು, ನಮ್ಮ ನಾಯಕರುಗಳು ಟ್ವೀಟ್ ಮಾಡಿದರೆ, ಹೇಳಿಕೆಗಳನ್ನು ನೀಡಿದರೆ ಅದರ ವಿರುಧ್ದ ದಾಖಲಾಗುವುದೇ ಸ್ಪಷ್ಟ ನಿದರ್ಶನವಾಗಿದೆ.
ನಾವು ವಕ್ಫ್ ಕಾನೂನಿನ ವಿರುಧ್ದ ದೇಶಾದ್ಯಂತ ಹೋರಾಟಗಳನ್ನು ಕೈಗೊಂಡಾಗ ರಾಷ್ಟೀಯ ಅಧ್ಯಕ್ಷರನ್ನು ಸುಳ್ಳು ಕೇಸಿನಲ್ಲಿ ಬಂಧಿಸುತ್ತಾರೆ, ರಾಜ್ಯ ಕಛೇರಿಗಳಿಗೆ ಇಆ ದಾಳಿಯಾಗುತ್ತದೆ. ನಾವು ಫ್ಯಾಸಿಸ್ಟರ ವಿರುಧ್ದ ತೀಕ್ಷ್ಣ ಮಾತುಗಳಲ್ಲಿ ಪ್ರಶ್ನಿಸಿದಾಗ, ಇಲ್ಲಿ ನಡೆದಂತಹ ವಂಶ ಹತ್ಯೆಯನ್ನು, ಬಾಂಬ್ ಸ್ಪೋಟಗಳಲ್ಲಿ ಸಂಘ ಪರಿವಾರದ ಕೈವಾಡದ ಬಗ್ಗೆ ಈ ದೇಶದ ಜನರಿಗೆ ಸ್ಪಷ್ಟತೆಯನ್ನು ನೀಡುವಾಗ ಇಲ್ಲಿನ ವ್ಯವಸ್ಥೆ ನಮ್ಮನ್ನು ಧಮನಿಸಲು ಪ್ರಯತ್ನಿಸುತ್ತಿದೆ. ನೀವು ಎಷ್ಟೇ ದಮನಿಸಲು ಪ್ರಯತ್ನಿಸಿದರೂ ಫ್ಯಾಸಿಸ್ಟರ ವಿರುಧ್ದದ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳುತ್ತಲೇ ಇರುತ್ತದೆ ಎಂಬುದನ್ನು ಇಲ್ಲಿನ ಆಡಳಿತ ವರ್ಗ ಅರಿತುಕೊಳ್ಳುವುದು ಉತ್ತಮ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ರವರು ಈ ದೇಶದಲ್ಲಿ 2800 ಕ್ಕೂ ಅಧಿಕ ರಾಜಕೀಯ ಪಕ್ಷಗಳಿವೆ ಅವುಗಳಲ್ಲಿ ನಮ್ಮ ಪಕ್ಷವೂ ಒಂದು, ನಮ್ಮ ಪಕ್ಷವನ್ನು ಹೊರತುಪಡಿಸಿ ಇನ್ಯಾವುದೇ ಪಕ್ಷಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷವೊಂದಿದ್ದರೆ ಅದು ಎಸ್.ಡಿ.ಪಿ.ಐ ಮಾತ್ರ, ಇದು ಜನಸಾಮಾನ್ಯರಿಗೂ ತಿಳಿದ ವಿಷಯವಾಗಿದೆ. ಈ ದೇಶ ಭಯ ಮತ್ತು ಹಸಿವಿನಿಂದ ಮುಕ್ತವಾಗಿರಬೇಕೆಂದು ಭಯಸುವ ಪಕ್ಷ ಅದು ಎಸ್.ಡಿ.ಪಿ.ಐ ಮಾತ್ರವಾಗಿದೆ, ಪಕ್ಷದ ಈ ಘೋಷಣೆಯೇ ನಮ್ಮ ವಿರೋದಿಗಳ ಕಣ್ಣು ಕುಕ್ಕುತ್ತಿದೆ ಯಾಕೆಂದರೆ ನಮ್ಮನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು ಜನಸಾಮಾನ್ಯರನ್ನ ಹಸಿವು ಮತ್ತು ಭಯದ ಕೂಪಕ್ಕೆ ತಳ್ಳುತ್ತಿದೆ , ಇದರಿಂದಾಗಿಯೇ ಎಲ್ಲಾ ರಾಜಕೀಯ ಪಕ್ಷಗಳು ಎಸ್.ಡಿ.ಪಿ.ಐ ಯನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ, ಇದನ್ನೆಲ್ಲ ಮೆಟ್ಟಿ ನಿಂತು ನಮ್ಮ ಪಕ್ಷವು ಫೀನಿಕ್ಸ್ ಹಕ್ಕಿಯಂತೆ ಎದ್ದು ನಿಲ್ಲುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪಕ್ಷದ ತತ್ವ ಸಿಧ್ದಾಂತವನ್ನು ಒಪ್ಪಿ ಹಲವು ಯುವಕರು ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಸಭೆಯಲ್ಲಿ ಎಸ್.ಡಿ.ಪಿ.ಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು, ಜೊತೆ ಕಾರ್ಯರ್ಶಿ ರಹೀಂ ಪುತ್ತೂರು, ಕಬಕ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸಿದ್ದೀಕ್ ಉರಿಮಜಲು, ಕಾರ್ಯದರ್ಶಿ ಎಂ.ಎಚ್ ಸದ್ದಾಂ, ಕೊಡಿಪ್ಪಾಡಿ ಬ್ರಾಂಚ್ ಸಮಿತಿ ಉಪಾಧ್ಯಕ್ಷರಾದ ರಹೀಂ ಆನಾಜೆ, ಕಾರ್ಯದರ್ಶಿ ಹಫೀಝ್ ಆನಾಜೆ, ಹಂಝ ಮದನಿ, ಅಬ್ದುಲ್ಲಾ ಮುಸ್ಲಿಯಾರ್, ಯೂಸುಫ್ ಮುರ, ಹಸೈನಾರ್ ಹಾಜಿ ಡೆಂಬೆಲೆ ಮಜ್ಮಾ, ಹಮೀದ್ ಹಾಜಿ ಕಬಕ ಮಜ್ಮಾ, ಹನೀಫ್ ಡೆಂಬೆಲೆ, ಅಬ್ದುಲ್ ರಹಿಮಾನ್ ಆನಾಜೆ, ಅಶ್ರಫ್ ಕಲೆಂಬಿ, ಮುರ ಪುತ್ತು ಉಪಸ್ಥಿತರಿದ್ದರು.

ಕಬಕ ಬ್ಲಾಕ್ ಸಮಿತಿ ಉಪಾಧ್ಯಕ್ಷರಾದ ಅದ್ದು ಕೊಡಿಪ್ಪಾಡಿ ಸ್ವಾಗತಿಸಿ ವಂದಿಸಿದರು, ಕುಂಬ್ರ ಬ್ಲಾಕ್ ಸಮಿತಿ ಅಧ್ಯಕ್ಷರಾದ ರಿಯಾಝ್ ಬಳಕ್ಕ ಕಾರ್ಯಕ್ರಮ ನಿರೂಪಿಸಿದರು.


