ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಆಯೋಜಿಸಿದ್ದ ಸಂಘದ 2025ನೇ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮುಂಬಯಿ ಅಂಧೇರಿಯ ಪೂರ್ವದ ಸಾಲೀಟರಿ ಕಾರ್ಪೋರೆಟ್ ಪಾರ್ಕ್‌ನ ಕ್ಲಬ್ ಹೌಸ್ ಸಭಾಗೃಹದಲ್ಲಿ ನಡೆಯಿತು.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ಸಮತೋಲನ ವರದಿ ಮಾಡುವಿಕೆ, ನ್ಯಾಯಯುತ ಪತ್ರಿಕೋದ್ಯಮ, ಮಾಧ್ಯಮ ವಿಮರ್ಶೆಯಾಗಿರಬೇಕು. ವರದಿ ಮಾಡುವಿಕೆಯಲ್ಲಿ ಸೂಕ್ಷತೆಯು ಬಹಳ ಮುಖ್ಯವಾಗಿದ್ದು, ಸುದ್ದಿಯಲ್ಲಿ ಎಂದಿಗೂ ರಾಜಿ ಸಲ್ಲದು. ಪತ್ರಿಕೋದ್ಯಮದಲ್ಲಿ ಅಭ್ಯಾಸ, ಗುಣಮಟ್ಟ ಮಹಾರಾಷ್ಟ್ರದಲ್ಲಿನ ಕನ್ನಡಿಗ ಮಾಧ್ಯಮಗಳು ಕನ್ನಡಿಗರ ದೃಷ್ಟಿಕೋನದಿಂದ ವರದಿ ಮಾಡುತ್ತಿರುವುದು ಸ್ತುತ್ಯಾರ್ಹ. ಆದ್ದರಿಂದಲೇ ಮುಂಬಯಿವಾಸಿ ಕನ್ನಡಿಗ ಪತ್ರಕರ್ತರು ರಾಷ್ಟ್ರೀಯ ಪತ್ರಕರ್ತರಾಗಿದ್ದೀರಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನವ ದೆಹಲಿಯ ಹಿರಿಯ ಪತ್ರಕರ್ತ ಡಿ. ಉಮಪತಿ (ಚಿತ್ರದುರ್ಗ) ಅವರಿಗೆ ಶಾಲು ಹೊದಿಸಿ, ರೂ. 25,000/- ನಗದು, ಪುರಸ್ಕಾರ ಫಲಕ, ಪ್ರಶಸ್ತಿಪತ್ರ, ಫಲಪುಷ್ಫಗಳನ್ನಿತ್ತು 2025ನೇ ವಾರ್ಷಿಕ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಿ.ಉಮಪತಿ ಅವರು ಜನರಿಗೆ ಸತ್ಯವನ್ನು ಮುಟ್ಟಿಸುವ ಕೆಲಸ ಪತ್ರಕರ್ತರ ಧರ್ಮ. ನಾನು ಪ್ರಶಸ್ತಿಯನ್ನು ವಿನಮ್ರತೆ, ಸಂಕೋಚದಿಂದ ಸ್ವೀಕರಿಸಿದೆ. ಜನರ ವಕ್ತಾರರೇ ಪತ್ರಕರ್ತರು ಆಗಿದ್ದು, ಯುವ ಜನರಿಗೆ ಪ್ರಶಸ್ತಿಗಳು ನೀಡಿದಾಗ ಭಾವೀ ಜನಾಂಗಕ್ಕೆ ಸ್ಪೂರ್ತಿ ಪ್ರೇರಣೆಯಾಗುತ್ತದೆ. ಬರೆಯುವ ಕಲೆ ಇಲ್ಲದವರು ಪತ್ರಕರ್ತರಾಗಲು ಅಸಾಧ್ಯ. ಇಂದು ಪ್ರತಿಕಾವೃತ್ತಿ ಉದ್ಯಮವೃತ್ತಿಯಾಗಿ ಕಾರ್ಪೋರೇಟ್ ಮಟ್ಟಕ್ಕೆ ಬೆಳೆದಿದೆ. ಸಾಮಾಜಿಕ ಕಳಕಳಿ ಪತ್ರಕರ್ತರ ಆಗಬೇಕು ಎಂದು ಪ್ರಶಸ್ತಿಗೆ ಉತ್ತರಿಸಿ ತಿಳಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಇದೇ ಸಂದರ್ಭದಲ್ಲಿ ಕಲ್ಯಾಣ್ ಪರಿಸರದ ಹೆಸರಾಂತ ಎನ್‌ಜಿಒ ನ ಸಮಾಜ ಸೇವಾ ಕಾರ್ಯಕರ್ತೆ, ಟ್ರಾನ್ಸ್‌ಜೆಂಡರ್ ಶ್ರೀದೇವಿ ಲೋಂಡೆ ಅವರಿಗೆ ವಿಶೇಷ ಸನ್ಮಾನವನ್ನಿತ್ತು ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಜಿ.ಮುರುಳ್ಯ ಅವರು ಪ್ರವೃತ್ತಿಯ ಆಡಂಬರವಿಲ್ಲದ ವೃತ್ತಿಪರರು ಪತ್ರಕರ್ತರು. ಪುಸ್ತಕ-ಪೆನ್ನು ಆಸ್ತಿಯಾಗಿರಿಸಿದ ಪತ್ರಕರ್ತರು ಸಮಸ್ಯೆಗಳಿಗೆ ಪರಿಹಾರವನ್ನೀಡುವ ಶಕ್ತಿವುಳ್ಳವರಾಗಿದ್ದಾರೆ. ಜನನದಿಂದ ಮರಣದ ವರೇಗೆ ಸೇವೆಸಲ್ಲಿಸುವ ವೃತ್ತಿಯಿದ್ದರೆ ಅದು ಪತ್ರಕರ್ತರದ್ದಾಗಿದೆ. ಪತ್ರಕರ್ತರು ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಲು ಸ್ಪೂರ್ತಿದಾಯಕರಾಗಿದ್ದು ಜನರ ಒಳ್ಳೆಯ ಕೆಲಸಗಳನ್ನು ಗುರುತಿಸುವ ಕೆಲಸ ಪತ್ರಕರ್ತರು ಮಾಡುತ್ತಿರುವುದು ಪ್ರಶಂಸನೀಯ ಎಂದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ 2025-2028ರ ಸಾಲಿನ ಅಧ್ಯಕ್ಷೆ ಡಾ| ಜಿ.ಪಿ ಕುಸುಮಾ, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಗೌರವ ಪ್ರಧಾನ ಕಾರ್ಯದರ್ಶಿ ಸವಿತಾ ಸುರೇಶ್ ಶೆಟ್ಟಿ, ಗೌರವ ಕೋಶಾಧಿಕಾರಿ ಸುರೇಶ್ ಕೆ.ಮೂಲ್ಯ, ಜೊತೆ ಕಾರ್ಯದರ್ಶಿ ಶ್ಯಾಮ್ ಎಂ.ಹಂಧೆ, ಜೊತೆ ಕೋಶಾಧಿಕಾರಿ ಡಾ| ದುರ್ಗಪ್ಪ ವೈ.ಕೋಟಿಯವರ್ ಮತ್ತು ಪದಾಧಿಕಾರಿಗಳಿಗೆ ಆಯೇಷಾ ಖಾನಮ್ ಪುಷ್ಪಗುಚ್ಫಗಳನ್ನಿತ್ತು ಅಧಿಕಾರ ವಹಿಸಿಕೊಟ್ಟರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಮತ್ತು ಪ್ರಶಸ್ತಿ ಸಮಿತಿ ಕಾರ್ಯಾಧ್ಯಕ್ಷೆ ಡಾ. ಸುನೀತಾ ಎಂ.ಶೆಟ್ಟಿ , ಸಮಾಜಿಕ ಕಾರ್ಯಕರ್ತ ಜೋನ್ ವಿಲ್ಸನ್ ಲೋಬೊ, ಕನ್ನಡ ಸಂಘ ಸಾಂತಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ, ಸುರೇಶ್ ಎಸ್.ಸಾಲಿಯಾನ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ರಂಗ ಎಸ್.ಪೂಜಾರಿ, ಡಾ. ಜಿ.ಪಿ ಕುಸುಮಾ, ಅನಿತಾ ಪಿ.ಪೂಜಾರಿ ತಾಕೋಡೆ, ಕರುಣಾಕರ್ ವಿ.ಶೆಟ್ಟಿ, ಗೋಪಾಲ ಪೂಜಾರಿ ತ್ರಾಸಿ, ಶ್ಯಾಮ ಎಂ.ಹಂಧೆ, ಸಲಹಾ ಸಮಿತಿ ಸದಸ್ಯ ಸುರೇಂದ್ರ ಎ.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯರಾದ ಡಾ. ಶಿವರಾಮ ಕೆ. ಭಂಡಾರಿ, ನ್ಯಾಯವಾದಿ ಅಮಿತಾ ಎಸ್.ಭಾಗ್ವತ್, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಸ್ಥಾಪಕ ಉಪಾಧ್ಯಕ್ಷ ಸದಾನಂದ ಡಿ.ನಾಯಕ್, ಸುಧಾಕರ್ ಉಚ್ಚಿಲ್, ಚಂದ್ರವತಿ ದೇವಾಡಿಗ ಉಪಸ್ಥಿತರಿದ್ದರು.

ವಿದ್ಯಾ ಎಂ.ಭಂಡಾರಿ ಪ್ರಾರ್ಥನೆಯನ್ನಾಡಿದರು. ಉಪಾಧ್ಯಕ್ಷ ಡಾ. ಶಿವ ಮೂಡಿಗೆರೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ಜತೆ ಕಾರ್ಯದರ್ಶಿಸವಿತಾ ಎಸ್.ಶೆಟ್ಟಿ, ಜತೆ ಕೋಶಾಧಿಕಾರಿ ಡಾ. ದುರ್ಗಪ್ಪ ವೈ.ಕೋಟಿಯವರ್, ಜಯರಾಮ ಜಿ.ನಾಯಕ್ ಅತಿಥಿಗಳನ್ನು ಹಾಗೂ ಗೌ| ಪ್ರ| ಕಾರ್ಯದರ್ಶಿ ಸಾ.ದಯಾ (ದಯಾನಂದ್) ಸನ್ಮಾನಿತರನ್ನು ಪರಿಚಯಿಸಿದರು. ಡಾ. ಜಿ.ಪಿ ಕುಸುಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


