ಮಂಗಳೂರು: ಸ್ವಚ್ಛತಾ ಹಿ ಸೇವಾ ಆಂದೋಲನದ ಉತ್ತಮ ನಿರ್ವಹಣೆಗಾಗಿ ಪ್ರತಿ ವರ್ಷ ಗಾಂಧಿ ಜಯಂತಿ ದಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪುರಸ್ಕಾರ ಪತ್ರ ನೀಡುತ್ತಿದ್ದು, 2024 ರ ಪುರಸ್ಕಾರ ಪತ್ರವನ್ನ ಹೊಸಂಗಡಿ ಗ್ರಾಮ ಪಂಚಾಯತ್ ಪಿ ಡಿ ಓ ಗಣೇಶ್ ಶೆಟ್ಟಿ ಪಡೆದಿದ್ದಾರೆ.
ಭಾರತ ಸರಕಾರದ ಜಲಶಕ್ತಿ ಮಂತ್ರಾಲಯ ಮತ್ತು ಕರ್ನಾಟಕ ಸರಕಾರದ ನೀರು ನೈರ್ಮಲ್ಯ ಇಲಾಖೆಯ ಅಡಿಯಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 2 ತಾರೀಖಿನವರೆಗೆ ಸ್ವಚ್ಚತಾ ಹಿ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ಆಂದೋಲನ ರೀತಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಆಯೋಜಿಸುತ್ತಿವೆ.ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿ ಬೆಳ್ತಂಗಡಿ ತಾಲುಕು ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ 50 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿ ತಾಲ್ಲೂಕಿನಲ್ಲಿ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಗಣೇಶ್ ಶೆಟ್ಟಿ ಯವರು ಆಯ್ಕೆಯಾಗಿದ್ದಾರೆ.

ರಾಜ್ಯ ನೈರ್ಮಲ್ಯ ರತ್ನ ಪ್ರಶಸ್ತಿ ಯನ್ನೂ 2011 ರಲ್ಲಿ ಮೊದಲ ಬಾರಿಗೆ ಪಡೆದ ರಾಜ್ಯದ ಮೊದಲ ಪಂಚಾಯತ್ ಹೊಸಂಗಡಿ. ಅಂದಿನಿಂದಲೂ ವಿವಿಧ ವಿನೂತನ ಮಾದರಿ ಕಾರ್ಯಕ್ರಮಗಳ ಮೂಲಕ ರಾಜ್ಯಕ್ಕೆ ಮಾದರಿ ಯಾಗಿದೆ.ಇದೀಗ ನನ್ನ ಮನೆ ಸ್ವಚ್ಛ ಮನೆ, ನನ್ನ ಕಾಲನಿ ಸ್ವಚ್ಛ ಕಾಲನಿ, ನನ್ನ ಅಂಗಡಿ ಸ್ವಚ್ಛ ಅಂಗಡಿ, ನನ್ನ ಅಂಗನವಾಡಿ ಸ್ವಚ್ಛ ಅಂಗನವಾಡಿ, ನನ್ನ ಶಾಲೆ ಸ್ವಚ್ಛ ಶಾಲೆ, ನನ್ನ ಗಿಡ ನನ್ನ ಮರ, ನನ್ನ ಮನೆ ನನ್ನ ರಸ್ತೆ ಮುಂತಾದ ಮಾದರಿ ಕಾರ್ಯಕ್ರಮಗಳನ್ನು ಆಯೋಜಿಸಿದೆ..ರೋಟರಿ ಕ್ಲಬ್ ಗಳು, ಲಯನ್ಸ್ ಕ್ಲಬ್, ರೋಟರೆಕ್ಟ್ , ಇನ್ನೆರವೀಲ್ ಕ್ಲಬ್ , ಫ್ರೆಂಡ್ಸ್ ಕ್ಲಬ್ , ಎನ್ ಎಸ್ ಎಸ್ , ಎನ್ ಸಿ ಸಿ ಹಾಗೂ ಸ್ಥಳೀಯ ಶಾಲೆಗಳು ಅಂಗನವಾಡಿಗಳ, ಸಂಜೀವಿನಿ ಒಕ್ಕೂಟದ ಸಹಕಾರದೊಂದಿಗೆ ಅತ್ಯುತ್ತಮವಾಗಿ ಸ್ವಚ್ಚತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ಹೊಸಂಗಡಿ ಗ್ರಾಮ ಪಂಚಾಯತ್ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿ ಆಗಿವೆ. ಈ ಎಲ್ಲಾ ಕಾರ್ಯಕ್ರಮ ಗಳಿಂದಾಗಿ ಹೊಸಂಗಡಿ ಪಂಚಾಯತ್ ಪಿ ಡಿ ಓ ಗಣೇಶ್ ಶೆಟ್ಟಿ ಪುರಸ್ಕಾರ ಪತ್ರ ಸ್ವೀಕರಿಸಿದ್ದಾರೆ.

ಮಂಗಳೂರಿನ ಪುರಭವನದ ಗಾಂಧೀ ಪ್ರತಿಮೆ ಯ ಎದುರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಪತ್ರವನ್ನ ಗಣೇಶ್ ಶೆಟ್ಟಿ ಪಡೆದರು.



ಗಣೇಶ್ ಶೆಟ್ಟಿ ಯವರು ಈ ಹಿಂದೆ ಆರಂಬೋಡಿ ಗ್ರಾಮ ಪಂಚಾಯತ್ ಪಿ ಡಿ ಓ ಆಗಿ ಉತ್ತಮ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದರು, ಬಳಿಕ ಹೊಸಂಗಡಿ ಪಂಚಾಯತ್ ಪಿ ಡಿ ಓ ಆಗಿ ಕಾರ್ಯನಿರ್ವಹಿಸುತ್ತಿದ್ದರು.ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ರೋಟರಿ ಕ್ಲಬ್ ನಲ್ಲಿ ಸಕ್ರಿಯರಾಗಿದ್ದು ಪ್ರಸ್ತುತ ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ ಇದರ ವಲಯ ಸೇನಾನಿಯಾಗಿದ್ದಾರೆ. ಇದಲ್ಲದೆ ಬಂಟರ ಸಂಘ ಬಂಟ್ವಾಳ ತಾಲೂಕು ಇದರ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.



