ಮಂಗಳೂರು: ಈಜುಕೊಳದ ನೀರಿನೊಳಗೆ ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್‌ಸಾಲ್ಟ್ ಎಂಬ ಸ್ಟಂಟ್ ಮಾಡಿ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಮಾಡಿದ್ದ ಕೆ. ಚಂದ್ರಶೇಖರ್ ರೈ ಸೂರಿಕುಮೇರು ಅವರು ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಆ.10 ರಂದು ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ನಡೆದಿದೆ.

ಮಂಗಳೂರು ಪಾಲಿಕೆಯ ಈಜುಕೋಳದಲ್ಲಿ ಲೈಫ್ ಗಾರ್ಡ್ ಮತ್ತು ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಆ.10 ರಂದು ಭಾನುವಾರ ಈಜುಕೊಳಕ್ಕೆ ರಜೆ ಇದ್ದ ಸಮಯದಲ್ಲಿ ಈಜುಕೊಳದಲ್ಲಿ ಮುಳುಗಿ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿ ತನಿಖೆ ನಡೆಸುತ್ತಿದ್ದಾರೆ.



