Breaking
29 Jul 2025, Tue

ಅತ್ತಿಗೆ ಜೊತೆ ಹುಲ್ಲು ತರಲು ಹೋದ ಯುವತಿ ಕಾಲು ಜಾರಿ ಅಣೆಕಟ್ಟಿಗೆ ಬಿದ್ದು ಸಾವು

ಕುಂದಾಪುರ: ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಜಂಬೆಹಾಡಿಯಲ್ಲಿ ದನಗಳಿಗೆ ಹುಲ್ಲು ತರಲು ಹೋಗಿದ್ದ ಯುವತಿ ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಜೂನ್ 19 ರಂದು ನಡೆದಿದೆ.

ಮೃತಪಟ್ಟ ಯುವತಿ ಜಡ್ಡಿನಗದ್ದೆಯ ಜಂಬೆಹಾಡಿ ಸಂಜೀವ ನಾಯ್ಕ ಮತ್ತು ನರ್ಸಿ ದಂಪತಿಯ ಮಗಳು ಮೂಕಾಂಬಿಕಾ (23) ಎಂದು ಗುರುತಿಸಲಾಗಿದೆ.

ಬೆಳಗ್ಗೆ ಹುಲ್ಲು ತರಲು ಅತ್ತಿಗೆ ಅಶ್ವಿನಿ ಅವರೊಂದಿಗೆ ತೋಟಕ್ಕೆ ಹೋಗಿದ್ದು, ಮನೆಗೆ ಹಿಂದಿರುಗುವಾಗ ಅಶ್ವಿನಿ ಅವರು ಹುಲ್ಲಿನ ಹೊರೆಯನ್ನು ಹೊತ್ತುಕೊಂಡು ಮನೆಯ ಕಡೆಗೆ ಬರುತ್ತಿದ್ದ ವೇಳೆ ಮೂಕಾಂಬಿಕಾ ಅವರನ್ನು ಹಿಂಬಾಲಿಸುತ್ತಿದ್ದರು. ಮನೆ ತಲುಪಿದ ಅಶ್ವಿನಿ ಅವರು ಹಿಂದಿರುಗಿ ನೋಡಿದಾಗ ಮೂಕಾಂಬಿಕಾ ಜೊತೆಗೆ ಇರಲಿಲ್ಲ. ಅವರನ್ನು ಕರೆಯುತ್ತ ಪುನಃ ತೋಟದ ಕಡೆಗೆ ತೆರಳಿದರು.

ಅಶ್ವಿನಿಯವರು ಮೂಕಾಂಬಿಕಾ ಕಾಣೆಯಾಗಿದ್ದನ್ನು ಗಮನಿಸಿ ತಕ್ಷಣ ಹುಡುಕಾಟ ಆರಂಭಿಸಿ, ಅಣೆಕಟ್ಟಿನ ದಂಡೆಯ ಮೇಲೆ ಹುಲ್ಲಿನ ಕತ್ತಿ ಕಂಡು ಬೊಬ್ಬೆ ಹಾಕಿದಾಗ ಮನೆಯವರು ಓಡಿ ಬಂದು ಹುಡುಕಾಟ ನಡೆಸಿ ಮೃತದೇಹ ಪತ್ತೆಹಚ್ಚಿದರು.

ಮರಳಿ ಬರುವಾಗ ಅಶ್ವಿನಿ ಅವರು ಅಣೆಕಟ್ಟಿನ ಕೆಳಭಾಗದಲ್ಲಿ ಹೊಳೆಗೆ ಇಳಿದು ದಾಟಿಕೊಂಡು ಬಂದಿದ್ದರು. ಆದರೆ ಮೂಕಾಂಬಿಕಾ ಅವರು ಅಲ್ಲಿ ಅತ್ತಿಗೆಯನ್ನು ಹಿಂಬಾಲಿಸದೆ ಅಣೆಕಟ್ಟಿನ ದಂಡೆಯ ಮೇಲಿನಿಂದ ಬಂದ ಕಾರಣ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಶಂಕರ ನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಅಮಾಸೆಬೈಲು ಠಾಣೆಯ ಎಸ್‌ಐ ಅಶೋಕ ಕುಮಾರ್, ಅಮಾಸೆಬೈಲು ವಿಎಒ ಚಂದ್ರಶೇಖರ ಮೂರ್ತಿ, ಪಿಡಿಒ ಸ್ವಾಮಿನಾಥ್, ಗ್ರಾ.ಪಂ. ಸದಸ್ಯ ಚಂದ್ರ ಶೆಟ್ಟಿ ಮೊದಲಾದವರು ಭೇಟಿ ನೀಡಿದರು. ಶಾಸಕ ಕಿರಣ್ ಕುಮಾರ ಕೊಡ್ಗಿ ಅವರು ಮೂಕಾಂಬಿಕಾ ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಈ ಕುರಿತು ಮೂಕಾಂಬಿಕಾ ತಾಯಿ ನರ್ಸಿ ಅವರು ಪೊಲೀಸರಿಗೆ ದೂರು ನೀಡಿದ್ದು, ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರು ತಂದೆ, ತಾಯಿ, 6 ಮಂದಿ ಸಹೋದರಿಯರು ಮತ್ತು ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *