ಉಪ್ಪಿನಂಗಡಿ: ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾದ ಘಟನೆ ಜೂನ್ 18 ರ ಸಂಜೆ ನಡೆದಿದೆ.
ಶೇಖಬ್ಬ ಹಾಜಿ ಎಂಬವರ ಮನೆ ಪಕ್ಕದಲ್ಲಿ ಕುಮಾರಧಾರ ನದಿಗಿಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಗಮನಿಸಿದ್ದು, ತಕ್ಷಣ ಮಕ್ಕಳು ಸ್ಥಳೀಯ ನಿವಾಸಿಗಳಾದ ಅಝೀಝ್ ಪಿ.ಟಿ. ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ಅವರು ಅದೇನೆಂದು ನೋಡಲು ಹೋದಾಗ ಮೊಸಳೆಯು ನದಿ ದಡದಲ್ಲಿ ವಿಶ್ರಾಂತಿ ಪಡೆಯುವುದು ಕಂಡು ಬಂದಿತ್ತು. ಅವರು ಸ್ವಲ್ಪ ಸಮೀಪಕ್ಕೆ ಹೋದಾಗ ಮೊಸಳೆ ಆಕ್ರಮಣಕಾರಿಯಂತೆ ಅವರ ಕಡೆ ನೋಡಿದ್ದು, ಬಳಿಕ ನದಿ ನೀರಿಗೆ ಇಳಿದು ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿ ಹಾಗೂ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂ ಬಳಿಯೂ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಮೊಸಳೆಗಳು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

