ಉಜಿರೆ : ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿಕ್ಲಬ್, ಎಸ್.ಡಿ.ಎಂ. ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕ, ಎಸ್.ಡಿ.ಎಂ. ಕ್ರೀಡಾಸಂಘ ಹಾಗೂ ಸ್ಥಳೀಯ ಸಂಘಟನೆಗಳ ಸಹಯೋಗದಲ್ಲಿ ಯಶೋವಿಜಯ: ಬದುಕು-ನೆನಪು-ಸ್ಮರಣೆ ಕಾರ್ಯಕ್ರಮ ಹಾಗೂ ಸರ್ಕಾರಿ ಶಾಲಾವಿದ್ಯಾರ್ಥಿಗಳಿಗೆ ಚೀಲ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಮೇ.25 ರಂದು ನಡೆಯಿತು.
ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಸೋನಿಯ ಯಶೋವರ್ಮ ಅವರು ಮಾತನಾಡಿ ಕೀರ್ತಿಶೇಷ ಡಾ. ಬಿ.ಯಶೋವರ್ಮ ಮತ್ತು ವಿಜಯರಾಘವ ಪಡ್ವೆಟ್ನಾಯರ ಸರಳ ಹಾಗೂ ಶಿಸ್ತುಬದ್ಧ ಜೀವನ, ಸೇವೆ-ಸಾಧನೆ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದರು.
ಡಾ. ಪ್ರದೀಪ್ ನಾವೂರು, ಬದುಕುಕಟ್ಟೋಣ ತಂಡದಿಂದ ಕಲ್ಮಂಜದಲ್ಲಿ ನಿರ್ಮಿಸಿದ ಹೊಸ ಮನೆ ವಿಜಯದ ಕೀ ಯನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಡಾ. ಬಿ. ಯಶೋವರ್ಮರು ರಚಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಅವರು ಆರುನೂರಕ್ಕೂ ಮಿಕ್ಕಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಚೀಲ ಮತ್ತು ಕೊಡೆಗಳನ್ನು ವಿತರಿಸಿ ಶುಭ ಹಾರೈಸಿದರು.

ಈ ವೇಳೆ ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಪೂರನ್ವರ್ಮ, ಎಸ್.ಡಿ.ಎಂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಮಹೇಶ್ಕುಮಾರ್ ಶೆಟ್ಟಿ ಶುಭಾಶಂಸನೆ ಮಾಡಿದರು.
ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆಯವರು ಕೊಡುಗೆಯಾಗಿ ನೀಡಿದ 350 ಪುಸ್ತಕಗಳನ್ನು ಕರ್ನೋಡಿ ಸರ್ಕಾರಿ ಶಾಲೆಗೆ ಹಸ್ತಾಂತರಿಸಲಾಯಿತು.
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಕೀಲ ಧನಂಜಯಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಕಾರ್ಯಕ್ರಮದಲ್ಲಿ ಸಂದೇಶ್ ರಾವ್, ಶ್ರೀಧರ್ ಕೆ.ವಿ., ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ತುಳುಪುಳೆ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಕೆ. ಉಪಸ್ಥಿತರಿದ್ದರು.
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ಕುಮಾರ್ ಸ್ವಾಗತಿಸಿದರು. ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಧನ್ಯವಾದವಿತ್ತರು. ಆರ್.ಜೆ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

