Breaking
28 Jul 2026, Tue

ಮಂಗಳಸೂತ್ರ, ಜನಿವಾರ ತೆಗೆದಿಟ್ಟು ಪರೀಕ್ಷೆ ಬರೆಯಲು ಮಾರ್ಗಸೂಚಿ: ವಿಶ್ವ ಹಿಂದೂ ಪರಿಷತ್‌ ಕೆಂಡಾಮಂಡಲ

ಮಂಗಳೂರು: ಸಿಇಟಿ ಪರೀಕ್ಷೆಯ ವೇಳೆ ಜನಿವಾರ ಕಳಚುವಂತೆ ಪರೀಕ್ಷಾ ಕೇಂದ್ರಗಳಲ್ಲಿ ಹೇಳಿದ್ದರಿಂದ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ವಿವಾದದ ಕಿಡಿ ಆರುವ ಮುನ್ನವೇ, ರೈಲ್ವೆ ನೇಮಕಾತಿ ಮಂಡಳಿಯು ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಮಂಗಳಸೂತ್ರ, ಜನಿವಾರ ತೆಗೆದಿಟ್ಟು ಪರೀಕ್ಷೆ ಬರೆಯಲು ಮಾರ್ಗಸೂಚಿ ಹೊರಡಿಸಿದ್ದು ಸಂಘ ಪರಿವಾರ ಕೆಂಡಾಮಂಡಲವಾಗಿದೆ.

ಎ. 28, 29, 30 ರಂದು ರೈಲ್ವೆ ನೇಮಕಾತಿ ಮಂಡಳಿಯು ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್‌ ಕಿಡಿ ಕಾರಿದ್ದಾರೆ.

“ರೈಲ್ವೇ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಎ. 28, 29, 30 2025 ರಂದು ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಆ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಸಂಪ್ರದಾಯಗಳಾದ ಮಂಗಳಸೂತ್ರ, ಜನಿವಾರಗಳನ್ನೂ ತೆಗೆದು ಪರೀಕ್ಷೆ ಬರೆಯುವಂತೆ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆ ಸಹಿಸಲು ಅಸಾಧ್ಯ, ಮಾನ್ಯ ಜಿಲ್ಲಾಧಿಕಾರಿಗಳೇ, ಸಂಸದರೇ ಇಂತಹ ಆದೇಶವನ್ನು ಕೈಬಿಟ್ಟು ನಡೆಯಲಿರುವ ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ”, ಎಂದಿದ್ದಾರೆ.

ವಿಶ್ವ ಹಿಂದೂ ಪರಿಷತ್‌ ನ ಪ್ರಚಾರ ಪ್ರಮುಖ್ ಪ್ರದೀಪ್‌ ಸರಿಪಲ್ಲ ಅವರು ” ರೈಲ್ವೆ ನೇಮಕಾತಿ ಪರೀಕ್ಷೆ ಬರೆಯಬೇಕಾದರೆ ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ, ಜನಿವಾರಗಳನ್ನೂ ತೆಗೆಯಬೇಕೆಂದು ಸೂಚನೆ ನೀಡಿರುವುದು ಸರಿಯಲ್ಲ. ರಾಜ್ಯದಲ್ಲಿ ಇತ್ತೀಚಿಗೆ ನಡೆದ ಸಿಇಟಿ ಪರೀಕ್ಷೆ ಬರೆಯುವ ಹಿಂದೂ ಅಭ್ಯರ್ಥಿಗಳ ಜನಿವಾರವನ್ನು ಕಿತ್ತು ಹಾಕಿದ ಪ್ರಕರಣದಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ. ಇದು ಇಡೀ ದೇಶದ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹೆಣ್ಣುಮಕ್ಕಳು ತಾಳಿ ಸರ ಕಳಚುವಂತೆ, ಸಿಂಧೂರ ಅಳಿಸುವಂತೆ ಮಾಡುವುದು, ಪವಿತ್ರ ಜನಿವಾರವನ್ನು ಕಿತ್ತುಹಾಕುವಂತೆ ಹೇಳುವುದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗುತ್ತದೆ. ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕ್ರಮಕೈಗೊಳ್ಳಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *