Breaking
24 Nov 2026, Tue

ಶ್ರೀ ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನದ ಅಂಗವಾಗಿ ಬಂಟ್ವಾಳದಲ್ಲಿ ವಿವಿಧ ಸೇವಾ ಕಾರ್ಯಕ್ರಮ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮದಿನದ ಪ್ರಯುಕ್ತ ನವೆಂಬರ್ 25ರಂದು ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳು ನಡೆಯಲಿವೆ.
ಜನಜಾಗೃತಿ ವೇದಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಘಟಕ, ನವಜೀವನ ಸಮಿತಿ ಸದಸ್ಯರು ಹಾಗೂ ವೀರೇಂದ್ರ ಹೆಗ್ಗಡೆಯವರ ಅಭಿಮಾನಿಗಳ ಬಳಗದ ವತಿಯಿಂದ ಈ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಜನ್ಮದಿನದ ಅಂಗವಾಗಿ ಬಂಟ್ವಾಳದ ಆದಿನಾಥ ಜೈನ ಬಸದಿಯಲ್ಲಿ ಶ್ರೀ ವೀರೇಂದ್ರ ಹೆಗ್ಗಡೆಯವರ ಹೆಸರಿನಲ್ಲಿ ವಿಶೇಷ ಪೂಜೆ ನೆರವೇರಿಸಲಾಗುವುದು. ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆಯ 50 ಒಳರೋಗಿಗಳಿಗೆ ಬೆಡ್ಶೀಟ್ ವಿತರಣೆ ಮಾಡಲಾಗುವುದು.
ನೆತ್ತರಕೆರೆ ಶ್ರಾವ್ಯ ಗೋಶಾಲೆಗೆ ಮೇವು, ರಾಧಾ ಸುರಭಿ ಗೋ ಮಂದಿರ ಹಾಗೂ ಗೋವಿನ ತೋಟ ಕೊದ್ಮಣ್ ಗೋಶಾಲೆಗೆ ಹಸಿರು ಹುಲ್ಲು ಮತ್ತು ಹಿಂಡಿ ವಿತರಣೆ ನಡೆಯಲಿದೆ. ಧನುಪೂಜೆ ಕಾಗುಡ್ಡೆ ಹಾಗೂ ತೆಂಕಬೆಳ್ಳೂರು ಅಂಗನವಾಡಿಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗುವುದು.
ಮಣಿನಾಲ್ಕೂರು ವೃದ್ಧಾಶ್ರಮಕ್ಕೆ ಹಣ್ಣುಹಂಪಲು ಮತ್ತು ಅಡುಗೆ ಸಾಮಗ್ರಿಗಳನ್ನು ವಿತರಿಸಲಾಗುವುದು. ಬಡ ಕುಟುಂಬಗಳ ಮನೆಗಳಿಗೆ ದಿನಸಿ ಸಾಮಗ್ರಿ ವಿತರಣೆ, ಅಂಗನವಾಡಿ ಮಕ್ಕಳಿಗೆ ಸಿಹಿತಿಂಡಿ ವಿತರಣೆ ಹಾಗೂ ಕಾರ್ಯಕರ್ತರಿಂದ ಅಂಗನವಾಡಿ ಸ್ವಚ್ಛತಾ ಕಾರ್ಯವೂ ನಡೆಯಲಿದೆ.


ಇದಲ್ಲದೆ, ರಕೇಶ್ವರಿ ದೇವಸ್ಥಾನ, ಕರೆಂಕಿ ದುರ್ಗಾಪರಮೇಶ್ವರಿ ದೇವಸ್ಥಾನ, ಗೋಪಾಲಕೃಷ್ಣ ದೇವಸ್ಥಾನ ಪುಂಜಾಲಕಟ್ಟೆ, ಮಹಾದೇವ ದೇವೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನ ಕಜೆಕಾರು, ದುರ್ಗಾಪರಮೇಶ್ವರಿ ದೇವಸ್ಥಾನ ಬಾಚಿಕರೆ ಹಾಗೂ ಕೋರ್ಯಾರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಹೂವಿನ ಪೂಜೆ ನೆರವೇರಿಸಲಾಗುವುದು.
ಅರಳ ಅಂಗನವಾಡಿಗೆ ಸಿಹಿತಿಂಡಿ ವಿತರಣೆ ಹಾಗೂ ರಾಯಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೊಂಡಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಬಂಟ್ವಾಳ ಯೋಜನಾ ಕಚೇರಿಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *