Breaking
24 Nov 2026, Tue

ಪಣೋಲಿಬೈಲಿನಲ್ಲಿ ರೂ.2 ಕೋಟಿ ವೆಚ್ಚದ ನೂತನ ಅನ್ನಛತ್ರ ಲೋಕಾರ್ಪಣೆ

ಬಂಟ್ವಾಳ: ಜಿಲ್ಲೆಯ ಪ್ರಸಿದ್ಧ ಕಾರಣಿಕ ಕ್ಷೇತ್ರವಾದ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಅನುಕೂಲವಾಗುವಂತೆ ರೂ.2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಅನ್ನಛತ್ರವು ಭಕ್ತರ ದೇಣಿಗೆಯ ಸದುಪಯೋಗಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಅನ್ನಛತ್ರ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, ಇತಿಹಾಸ ಪ್ರಸಿದ್ಧ ಪಣೋಲಿಬೈಲು ಕ್ಷೇತ್ರದಲ್ಲಿ ನೂತನ ಅನ್ನಛತ್ರ ನಿರ್ಮಾಣಗೊಂಡಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಅಪಾರ ಸಂಖ್ಯೆಯ ಭಕ್ತರಿಗೆ ಅನುಕೂಲವಾಗಲಿದೆ ಎಂದರು.

ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಣೋಲಿಬೈಲು ಕ್ಷೇತ್ರವು ಜಿಲ್ಲೆಯಲ್ಲಿ ಗರಿಷ್ಠ ಆದಾಯ ತರುವ ‘ಎ’ ದರ್ಜೆಯ ಧಾರ್ಮಿಕ ಕ್ಷೇತ್ರವಾಗಿ ಭಕ್ತರ ಗಮನ ಸೆಳೆದಿದೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಪಣೋಲಿಬೈಲು ಕಾರಣಿಕದ ಕಲ್ಲುರ್ಟಿ ಕ್ಷೇತ್ರವು ಎಲ್ಲ ಧರ್ಮದ ಭಕ್ತರು ಆಗಮಿಸಿ ನೆಮ್ಮದಿ ಕಂಡುಕೊಳ್ಳುವ ಪುಣ್ಯಕ್ಷೇತ್ರವಾಗಿದೆ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಎಸ್. ಗಟ್ಟಿ ಹಾಗೂ ತಹಶೀಲ್ದಾರ್ ಜಿ. ಮಂಜುನಾಥ್ ಶುಭ ಹಾರೈಸಿದರು.

ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಪ್ರಮುಖರಾದ ರವೀಂದ್ರನಾಥ ಭಂಡಾರಿ ಮುಂಬೈ, ರೋಹಿತ್ ಶೆಟ್ಟಿ ನಗ್ರಿಗುತ್ತು, ಕೆ. ಪದ್ಮನಾಭ ರೈ, ರಮೇಶ್ ಕುಲಾಲ್ ಪಣೋಲಿಬೈಲು, ಕೆ. ಸಂಜೀವ ಪೂಜಾರಿ ಮೆಲ್ಕಾರ್, ಶೋಭಿತ್ ಪೂಂಜ, ಶ್ರೀಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಉದ್ಯಮಿ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿದರು. ಗಿರೀಶ್ ಪೂಜಾರಿ ಪೆರ್ವ ವಂದಿಸಿದರು. ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *